ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸತತ ಏರುಗತಿಯಲ್ಲಿದ್ದು,ಈಗ ಒಂದು ಲಕ್ಷ ದಾಟಿದೆ. ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5324 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.
ಇದೀಗ ರಾಜ್ಯದಲ್ಲಿ ಒಟ್ಟಾರೆಯಾಗಿ 101465 ಸೋಂಕು ಪ್ರಕರಣಗಳು ದಾಖಲುಗೊಂಡಂತಾಗಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಒಂದೇ ದಿನ ಐದು ಸಾವಿರ ದಾಟಿರುವುದು ಇದೇ ಸತತ 5ನೇ ದಿನವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಇದರಲ್ಲಿ ಅತಿ ಹೆಚ್ಚು ಅಂದ 1,953 ಪ್ರಕರಣಗಳು ಕೇವಲ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ.
ಜೊತೆಗೆ, ಇಂದು ಒಂದೇ ದಿನ ಸೋಂಕಿನಿಂದ 75 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 26 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,953 ಜನರು ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 1470 ಕೋವಿಡ್ 19 ಸೊಂಕು ಪ್ರಕರಣಗಳು ಪತ್ತೆಯಾಗಿವೆ. ಆ ಬಳಿಕದ ಸ್ಥಾನದಲ್ಲಿ ಬಳ್ಳಾರಿ (840), ಕಲಬುರಗಿ (631), ಮೈಸೂರು (296), ಉಡುಪಿ (225), ಧಾರವಾಡ (193), ಬೆಳಗಾವಿ (155), ಕೋಲಾರ (142), ಬೆಂಗಳೂರು ಗ್ರಾಮಾಂತರ (138), ರಾಯಚೂರು (120), ದಕ್ಷಿಣ ಕನ್ನಡ (119), ವಿಜಯಪುರ (110) ಮತ್ತು ದಾವಣಗೆರೆ (110) ಜಿಲ್ಲೆಗಳಿವೆ.
ಇನ್ನುಳಿದಂತೆ, ತುಮಕೂರು - 89, ಶಿವಮೊಗ್ಗ - 76, ಹಾಸನ - 66, ಯಾದಗಿರಿ - 64, ಗದಗ - 63, ರಾಮನಗರ - 62, ಮಂಡ್ಯ - 56, ಚಿತ್ರದುರ್ಗ - 51, ಬೀದರ್ - 42, ಚಿಕ್ಕಬಳ್ಳಾಪುರ - 40, ಉತ್ತರ ಕನ್ನಡ - 32, ಕೊಪ್ಪಳ - 28, ಬಾಗಲಕೋಟೆ - 27, ಹಾವೇರಿ - 27, ಚಿಕ್ಕಮಗಳೂರು - 26, ಚಾಮರಾಜನಗರ - 16 ಮತ್ತು ಕೊಡಗು - 10 ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇದೇ ವೇಳೆ 37,685 ಮಂದಿ ಈವರೆಗೆ ಕೊರೋನಾ ವಿರುದ್ಧದ ಸಮರ ಗೆದ್ದು ಮನೆ ಸೇರಿದ್ದಾರೆ.ಕಳೆದ ಕೆಲವು ವಾರಗಳಿಂದ ಕೋರೋನಾ ಭೀತಿಯಲ್ಲಿರುವ ಬೆಂಗಳೂರಿನಲ್ಲಿ ಭಾನುವಾರ 784 ಮಂದಿ ಗುಣಮುಖರಾಗಿದ್ದರೆ, 1470 ಮಂದಿ ಹೊಸದಾಗಿ ಸೋಂಕಿಗೆ ಈಡಾಗಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿ ಈರೆಗಿನ ಸಕ್ರಿಯ ಸೋಂಕಿತರು 61,819 ಮಂದಿ ಇದ್ದರೇ ಶೇ 37.28 ಮಂದಿ ಗುಣ ಹೊಂದಿದ್ದಾರೆ. ರಾಜ್ಯದಲ್ಲಿ 1,847 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
1,01,465 ಸೋಂಕಿತರ ಪೈಕಿ 61,819 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 37,685 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 9,708 ರ‍್ಯಾಪಿಡ್ ಟೆಸ್ಟ್, 18,516 ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 28,224 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 71,268 ಮಂದಿಗೆ ರ‍್ಯಾಪಿಡ್ ಟೆಸ್ಟ್, 11,33,783 ಮಂದಿಗೆ ಆರ್‌ಟಿಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 12,05,051 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಈ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ ಬಿಸಿ ವ್ಯಾಪಕವಾಗಿರುವ ಬೆನ್ನಲ್ಲಿಯೇ ಮತ್ತೊಂದು ಬೆಳವಣಿಗೆ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದೆ. ರಾಜ್ಯದಲ್ಲಿ ಸೋಂಕಿತರ ಪೈಕಿ ಸುಮಾರು 50 ಸಾವಿರ ಮಂದಿಗೆ ಸೋಂಕು ಹೇಗೆ ತಗುಲಿತು ಎಂಬುದರ ವಿವರವೇ ಸಿಗದೇ ಸೊಂಕಿನ ವಿರುದ್ಧದ ಹೋರಾಟದಲ್ಲಿ ಅಧಿಕಾರಿಗಳು ಅತಂತ್ರಗೊಂಡಿದ್ದಾರೆ.
ರಾಜ್ಯದಲ್ಲೀಗ ಒಟ್ಟು ಒಂದು ಲಕ್ಷ ಮಂದಿ ಈ ಸೋಂಕಿಗೆ ಗುರಿಯಾಗಿದ್ದು ಶೇ. 37 ಮಂದಿ ಚೇತರಿಕೆ ಕಂಡಿದ್ದಾರೆ.ಸೋಂಕು ಪತ್ತೆಯಾದವರ ಪೈಕಿ ಅರ್ಧದಷ್ಟು ಜನರಲ್ಲಿ ಸೋಂಕು ಹೇಗೆ ವ್ಯಾಪಿಸಿತು ಎಂಬ ವಿವರಗಳಿಗಾಗಿ ಆರೋಗ್ಯಾಧಿಕಾರಿಗಳು ಹುಡುಕುತ್ತಿದ್ದಾರೆ.