ಬೆಂಗಳೂರು: ಮದಕರಿ ನಾಯಕ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆಯೇ ಖರ್ತಾನಾಕ್ ಹುಡುಗನೊಬ್ಬ ಪೈಲ್ವಾನ್ ಚಿತ್ರವನ್ನು ಒಂದೇ ದಿನದಲ್ಲಿ ಪೈರಸಿ ಮಾಡಿದ್ದ. ಇದರಿಂದ ಚಿತ್ರಕ್ಕೆ ತುಂಬಾ ಲಾಸ್ ಆಗಿತ್ತು. ಆ ವ್ಯಕ್ತಿ ಯಾರೆಂದು ಇದೀಗ ಬೆಳಕಿಗೆ ಬಂದಿದೆ.


ನಾನು ದರ್ಶನ್ ಅಭಿಮಾನಿ, ಅದೇ ಕಾರಣಕ್ಕೆ ಸಿನಿಮಾ ಲೀಕ್ ಮಾಡಿದೆ ಎಂದು ಆರೋಪಿ ರಾಕೇಶ್ ಪೈಲ್ವಾನ್ ಸಿನಿಮಾ ಪೈರಸಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ.


ವಿಚಾರಣೆ ವೇಳೆ ರಾಕೇಶ್,  ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟು. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದಿದ್ದಾರೆ. 


Find out more: