ಕನ್ನಡವನ್ನೇ ಉಸಿರಾಗಿಸಿಕೊಂಡು 'ಗೀತಾ' ಎಂಬ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ತೆರೆಗೆ ಬರುತ್ತಿದೆ. ಬರುವ ಮುಂಚೆಯೇ ಚಿತ್ರಮಂದಿರ ಸಮಸ್ಯೆ ನಮ್ಮನ್ನು ಕಾಡಲಿದೆ ಎಂಬ ಸುಳಿವೊಂದು ಗೋಲ್ಡನ್ ಗಣಿಗೆ ಸಿಕ್ಕಿದಂತಿದೆ. ಏಕೆಂದರೆ 'ಗೀತಾ' ಚಿತ್ರವು ಸೆ.27 ರಂದು ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲೇ ಅಂದರೆ ಅ.2 ರಂದು ಎರಡು ಮಲ್ಟಿಸ್ಟಾರ್ ಚಿತ್ರಗಳು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅವುಗಳೆಂದರೆ ವಾರ್ ಮತ್ತು ಸೈರಾ ನರಸಿಂಹ ರೆಡ್ಡಿ.
 
 ಈ ಚಿತ್ರದ ಕಥೆಯು ಗೋಕಾಕ್ ಚಳವಳಿಯ ಹಿನ್ನೆಲೆಯಲ್ಲಿ ಸಾಗಲಿದೆ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಗೋಕಾಕ್ ಕಥೆ ಇರುವುದರಿಂದ ಈ ಚಿತ್ರದ ಮೇಲೆ ನನಗೆ ಅಪಾರ ಗೌರವವಿದೆ. ಹೀಗಾಗಿ ನನ್ನ ಸಿನಿಮಾ ತಂಟೆಗೆ ಯಾರೂ ಬರಬೇಡಿ. ಇದರ ಪ್ರದರ್ಶನಕ್ಕೆ ಯಾರೇ ತೊಂದರೆ ಉಂಟು ಮಾಡಿದರೂ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ' ಎಂದು ಗಣೇಶ್ ಗುಡುಗಿದ್ದಾರೆ.


'ನಾವು ಇತರೆ ಭಾಷೆಯ ಸಿನಿಮಾಗಳ ಜತೆಗೆ ಪೈಪೋಟಿ ನೀಡುತ್ತಿದ್ದೇವೆ. ನಿಮ್ಮ ಪಾಡಿಗೆ ನೀವು ಚಿತ್ರಗಳನ್ನು ಮಾಡಿ. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡಿ. ಇದರ ಹೊರತಾಗಿ ನನ್ನ ಸಿನಿಮಾದ ತಂಟೆಗೆ ಕೈ ಹಾಕಬೇಡಿ. ಆ ರೀತಿ ನಡೆದುಕೊಂಡರೆ ನಾನು ಸುಮ್ಮನಿರುವುದಿಲ್ಲ. ಥಿಯೇಟರ್​ ಮುಂದೆ ಬಂದು ಪ್ರತಿಭಟನೆ ನಡೆಸುತ್ತೇನೆ' ಎಂದು ಖಡಕ್‌ ಆಗಿ ವಾರ್ನಿಂಗ್‌ ನೀಡಿದ್ದಾರೆ. 'ಗೀತಾ' ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳಿದ್ದು, ಒಂದು ರೋಮ್ಯಾಂಟಿಕ್ ಕಥೆಗೆ ಕನ್ನಡ ಹೋರಾಟದ ಟಚ್ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಚಿತ್ರದಲ್ಲಿ  ಗೋಲ್ಡನ್ ಗಣಿ ಲವರ್​ ಬಾಯ್​ ಹಾಗೂ ಹೋರಾಟಗಾರನ ಎರಡು ಶೇಡ್​ಗಳಲ್ಲಿ ಕಾಣಿಸಲಿದ್ದಾರೆ ಎಂಬುದು ಟ್ರೈಲರ್ ನೋಡಿದಾಗ ತಿಳಿದು ಬರುತ್ತದೆ.


'ಗೀತಾ' ಚಿತ್ರವು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಇದರೊಂದಿಗೆ ಕನ್ನಡದ 'ಕಿಸ್‌' ಹಾಗೂ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರಗಳೂ ಸಹ ಬಿಡುಗಡೆಯಾಗುತ್ತಿವೆ. ಕನ್ನಡದ ಕಾಳಜಿ, ಕನ್ನಡದ ಅರಿವು, ಕನ್ನಡಿಗರಿಗಾಗಿ ಮಾಡಿರುವ ಈ ಚಿತ್ರದಲ್ಲಿ ಗೋಕಾಕ್ ಚಳುವಳಿಯ ಒಂದಷ್ಟು ಮಾಹಿತಿಗಳೂ ಸಹ ಹೊರಬೀಳಲಿದೆ ಎನ್ನಲಾಗಿದೆ. ಹೀಗಾಗಿ ಪ್ರತಿಯೊಬ್ಬ ಕನ್ನಡಿಗರು ನೋಡಲೇಬೇಕಾದ ಸಿನಿಮಾ ಎಂದು ಸಿನಿ ಪ್ರಿಯರಿಂದ ತಿಳಿದುಬಂದಿದೆ.


Find out more: