ಚಿತ್ರ : ಗೀತಾ
ರೇಟಿಂಗ್: ****
ತಾರಾಗಣ: ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶ್ರೀವಾಸ್ತವ್, ಪ್ರಯಾಗ್ ಮಾರ್ಟಿನ್, ಪಾರ್ವತಿ ಇತರರು.
ನಿರ್ದೇಶಕ: ವಿಜಯ್ ನಾಗೇಂದ್ರ
ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಅಭಿನಯದ ಗೀತಾ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿತ್ತು. ಅದರಂತೆ ಚಿತ್ರವಿದೀಗ ಬಿಡುಗಡೆಯಾಗಿ ಕನ್ನಡಿಗರ ಮನ ಗೆದ್ದಿದೆ. ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯ ನಂಟು. ಗಣೇಶ್ ಸ್ಟೈಲ್ ಮತ್ತು ಇಮೇಜ್ ಗೆ ತಕ್ಕಂತೆ ಕಥೆಯೂ ಇದೆ. ಗಣೇಶ್ ಅವರಿಂದ ಏನಾದರೂ ಹೊಸ ರೀತಿ ಸಿನಿಮಾ ಬೇಕಲ್ವಾ ಎಂದುಕೊಂಡವರಿಗೆ ಸರ್ಪ್ರೈಸ್ ಕೂಡ ಇದೆ.
1981ರ ಸಮಯದಲ್ಲಿ ಕರ್ನಾಟಕದಲ್ಲಿ ಭಾಷೆಗೆ ಸಂಬಂಧಿಸಿದಂತೆ ಗೋಕಾಕ್ ಚಳುವಳಿ ಎಂಬ ಕ್ರಾಂತಿ ನಡೆಯುತ್ತೆ. ಹೋರಾಟದಲ್ಲಿ ಕನ್ನಡ ಭಾಷೆಗಾಗಿ ಹೋರಾಡುವ ಸ್ವಾಭಿಮಾನಿ ಕನ್ನಡಿಗನ ಪಾತ್ರದಲ್ಲಿ ಗಣೇಶ್ ನಟಿಸಿದ್ದಾರೆ. ಕಾಲಕ್ಕೆ ತಮ್ಮ ಕಾಸ್ಟ್ಯೂಮ್, ಸೆಟ್, ಅದಕ್ಕೆ ತಕ್ಕ ಲೋಕೇಶನ್ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲಾಗಿದೆ. ಚಳುವಳಿಯ ಸಾಕ್ಷ್ಯಚಿತ್ರದ ನೈಜ ದೃಶ್ಯಗಳನ್ನ ಬಳಸಿಕೊಂಡಿದ್ದಾರೆ. ಈ ಫ್ಲ್ಯಾಶ್ ಬ್ಯಾಕ್ ನಲ್ಲಿ ಗಣೇಶ್ ಅವರದ್ದು ಮಾಗಿದ ನಟನೆ. ಈ ಹೋರಾಟದ ಜೊತೆಜೊತೆಯಲ್ಲಿ ನಡೆಯುವ 'ಗೀತಾಂಜಲಿ' ಲವ್ ಸ್ಟೋರಿ ಕೂಡ ಉತ್ತಮ ಸಾಥ್ ಕೊಟ್ಟಿದೆ. ಒಂದು ಕಡೆ ಶಂಕರ್ ಪಾತ್ರದಲ್ಲಿ ಗಣೇಶ್ ಸ್ವಾಭಿಮಾನಿ ಕನ್ನಡಿಗನಾಗಿ ಅಬ್ಬರಿಸಿದರೆ, ಮತ್ತೊಂದು ಕಡೆ ಆಕಾಶ್ ಪಾತ್ರದಲ್ಲಿ ನ್ಯಾಚುರಲ್ ಅಭಿನಯ ನೀಡಿದ್ದಾರೆ.
'ಗೀತಾ' ಚಿತ್ರದಲ್ಲಿ ಮೂವರು ನಾಯಕಿಯರು. ಶಾನ್ವಿ ಶ್ರೀವಾಸ್ತವ್, ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್. ಈ ಮೂರು ಪಾತ್ರಗಳಿಗೂ ಸಮನಾದ ಪ್ರಾಮುಖ್ಯತೆ ಇದೆ. ಮೂವರು ಕೂಡ ಪಾತ್ರಗಳಿಗೆ ತಕ್ಕಂತೆ ನಟಿಸಿದ್ದಾರೆ. ರೆಟ್ರೋ ಮತ್ತು ಮಾಡ್ರನ್ ಹುಡುಗಿ ಆಗಿ ನಟಿಸಿರುವ ಶಾನ್ವಿ ಶ್ರೀವಾಸ್ತವ್ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ರೆಟ್ರೋ ಮತ್ತು ಮಾಡ್ರನ್ ಎರಡು ಶೇಡ್ ಗೆ ತಕ್ಕಂತೆ ಎಲ್ಲವನ್ನ ನಿಭಾಯಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರ ಗೆಲುವು ಕಂಡಿದ್ದಾರೆ. ಪಾತ್ರಗಳು ಆಯ್ಕೆ, ಕಥೆಯನ್ನ ಪ್ರಸೆಂಟ್ ಮಾಡಿರುವ ರೀತಿ, ಫ್ಲ್ಯಾಶ್ ಗಾಗಿ ಬಳಸಿಕೊಂಡಿರುವ ಟ್ವಿಸ್ಟ್ ಚಿತ್ರಕ್ಕೆ ಪ್ಲಸ್ ಪಾಯಿಂಟ್.