ಮಾಸ್ ಡೈಲಾಗ್ಸ್, ಕನ್ನಡತನದ ಪರಿಯಿಂದ  ಗೋಲ್ಡನ್​ ಸ್ಟಾರ್ ಗಣೇಶ್​​ ಅಭಿನಯದ ರೊಮ್ಯಾಂಟಿಕ್ ಆ್ಯಕ್ಷನ್​ ಸಿನಿಮಾ ಗೀತಾ ಮೊದಲ ವಾರವೇ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂಬುದು ಈ ವರದಿಯಿಂದಲೇ  ತಿಳಿಯುತ್ತದೆ.


ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ಆ್ಯಂಗ್ರಿ ಯಂಗ್​ಮ್ಯಾನ್ ಅವತಾರದಲ್ಲಿ ಪ್ರೀತಿಯ ಹುಡುಗ ಗಣೇಶ್ ಆರ್ಭಟಕ್ಕೆ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.  80ರ ದಶಕದ ಕನ್ನಡ ಹೋರಾಟಗಾರ ಮತ್ತು ರೊಮ್ಯಾಂಟಿಕ್​ ಬಾಯ್​, ಹೀಗೆ ಎರಡು ಶೇಡ್​ಗಳಿರೋ ಎರಡು ವಿಭಿನ್ನ ಪಾತ್ರಗಳನ್ನ ಗೋಲ್ಡನ್​ ಸ್ಟಾರ್ ಗಣೇಶ್ ನಟಿಸಿರೋ ಸಿನಿಮಾ ಗೀತಾ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವಿಜಯ್ ನಾಗೇಂದ್ರ, ಗೋಕಾಕ್​ ಚಳುವಳಿಯ ಜೊತೆಗೆ ಒಂದು ಸೊಗಸಾದ ಲವ್​ ಸ್ಟೋರಿ ಹೇಳಿ ಸಕ್ಸಸ್ ಕಂಡಿದ್ದಾರೆ. ಇದೀಗ ಗೀತಾ ಸಿನಿಮಾ ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣ್ತಿದೆ.


ಮೂವರು ನಾಯಕಿಯರನ್ನೊಳಕೊಂಡ ಗೀತಾ ಚಿತ್ರದ ಮೊದಲ ವಾರದ ಕಲೆಕ್ಷನ್ ಜೋರಾಗಿಯೇ ಇದೆ. ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಸಖತ್ ಸದ್ದು ಮಾಡುತ್ತಿದೆ.  ಸಯ್ಯದ್​ ಸಲಾಂ ಮತ್ತು ಶಿಲ್ಪಾ ಗಣೇಶ್​ ಜಂಟಿಯಾಗಿ ನಿರ್ಮಿಸಿರೋ ಗೀತಾ ಸಿನಿಮಾ ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿ ಸೌಂಡ್ ಮಾಡ್ತಿದೆ. ಗಣೇಶ್​​ ಜೊತೆಗೆ ನಾಯಕಿಯರಾಗಿ ಶಾನ್ವಿ ಶ್ರೀವಾಸ್ತವ್, ಪಾರ್ವತಿ, ಪ್ರಯಾಗ ಮಾರ್ಟಿನ್ ನಟಿಸಿದ್ದು, ಡೈನಾಮಿಕ್​​ ದೇವರಾಜ್​, ಸುಧಾರಾಣಿ, ರಂಗಾಯಣ ರಘು ಸೇರಿದಂತೆ ಅನುಭವಿ ಕಲಾವಿದರ ದಂಡು ಚಿತ್ರದಲ್ಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಸಿನಿಮಾವನ್ನ ಗೆಲ್ಲಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿತು. ತಮ್ಮ ಇಮೇಜನ್ನು ಬಿಡದೇ ಪ್ರಯೋಗಾತ್ಮಕ ಸಿನಿಮಾ ಮಾಡಿ ಗಣೇಶ್​ ಸಕ್ಸಸ್ ಕಂಡಿದ್ದಾರೆ.


ತಮಗೆ ತಿಳಿಸದೇ ಚಿತ್ರದ ಹಾಡೊಂದನ್ನ ಚಿತ್ರತಂಡ ಕಟ್​ ಮಾಡಿದೆ, ಅಂತ ನಟಿ ಶಾನ್ವಿ ಶ್ರೀವಾಸ್ತವ್​ ಬೇಸರ ವ್ಯಕ್ತಪಡಿಸಿದ್ರು. ಸಿನಿಮಾ ಕಾಲಾವಧಿ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕೆ ಹಾಡನ್ನ ಕತ್ತರಿಸಲಾಯ್ತು ಅಂತ ಚಿತ್ರತಂಡ ಹೇಳಿದ್ದು, ಇದೀಗ ಶಾನ್ವಿ ಮತ್ತೆ ಪತ್ರ ಬರೆದು ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.


Find out more: