ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವೊಂದು ಇಂಡೋನೇಷ್ಯಾದಲ್ಲಿ ಚಿತ್ರೀಕರಣವಾಗುತ್ತಿದ್ದು, ಭಾರೀ ಸದ್ದು ಮಾಡಲು ಭರ್ಜರಿ ತಯಾರಿ ನಡೆಸಲಾಗಿದೆ. ಪ್ರತಾಪ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ನವರತ್ನ. ಈ ಹಿಂದೆ ಬಂದು ಹೋದ ‘ಹುಚ್ಚುಡುಗ್ರು’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ‘ವ್ಯೂಹ’ ಹೆಸರಿನ ಕನ್ನಡ ಹಾಗೂ ತೆಲುಗು ಚಿತ್ರಕ್ಕೂ ನಿರ್ದೇಶಕರಾದವರು.
ಕೊಡಗಿನ ಬೆಡಗಿ ಮೋಕ್ಷಾ ಕುಶಾಲ್ ಇದರ ನಾಯಕಿ. ಮಂಡ್ಯ ಮೂಲದ ಉದ್ಯಮಿ ಸಿ.ಪಿ. ಚಂದ್ರಶೇಖರ್ ಇದರ ನಿರ್ಮಾಪಕ. ಶೀರ್ಷಿಕೆಗೆ ತಕ್ಕಂತೆ ಇದೊಂದು ನವರತ್ನಗಳ ಹಿಂದಿನ ಕತೆ. ಆ ಕತೆ ನಡೆಯುವುದೇ ಬಹುತೇಕ ದಟ್ಟಕಾಡಿನ ಮಧ್ಯೆ. ಅದೇನು ರಹಸ್ಯ ಎನ್ನುವುದನ್ನು ಚಿತ್ರತಂಡ ಟೀಸರ್ ಲಾಂಚ್ ಸಂದರ್ಭದಲ್ಲಿ ಹೇಳಿಕೊಂಡಿತು. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಚಿಕ್ಕಮಗಳೂರು, ಶೃಂಗೇರಿ ಹಾಗೂ ಇಂಡೊನೇಷಿಯಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕತೆಗೆ ಪೂರಕವಾಗಿ ಚಿತ್ರೀಕರಣ ಮಾಡಲು ದಟ್ಟವಾದ ಅರಣ್ಯ ಬೇಕಾಗಿತ್ತು. ಅದಕ್ಕಾಗಿ ಶೃಂಗೇರಿ ಸಮೀಪದ ಕಿಗ್ಗಾ ಕಾಡಿನ ನಡುವೆ ಪರವಾನಗಿ ಪಡೆದು ಚಿತ್ರೀಕರಣ ಮಾಡಿದ್ದೇವೆ. ಹಾಗೆಯೇ ಇಂಡೋನೇಷಿಯಾದ ಬಾಲಿ ಸಮೀಪದ ಕಾಡಿನಲ್ಲೂ ಚಿತ್ರೀಕರಣ ನಡೆದಿದೆ’ ಎನ್ನುತ್ತಾರೆ ನಿರ್ದೇಶಕ ಕಮ್ ನಾಯಕ ನಟ ಪ್ರತಾಪ್ ರಾಜ್ ಅವರು.
ನವರತ್ನ ಚಿತ್ರ ಶುರುವಾಗಿ ಈಗಾಗಲೇ ಎರಡು ವರ್ಷಗಳೇ ಕಳೆದಿದೆ. ಇಷ್ಟುಸಮಯ ಯಾಕೆ ಅಂದಾಗ ಚಿತ್ರದ ಕತೆಯೇ ಹಾಗಿದೆ ಎನ್ನುತ್ತಾ ಮಾತಿಗಿಳಿಯುತ್ತಾರೆ ನಿರ್ಮಾಪಕ ಚಂದ್ರಶೇಖರ್. ‘ಇದೊಂದು ವಿಶೇಷವಾದ ಕತೆ. ಅದಕ್ಕೆ ತಕ್ಕಂತೆ ಚಿತ್ರೀಕರಿಸಲು ಹೊರಟಾಗ ಸಾಕಷ್ಟುಸಮಯ ಬೇಕಾಯಿತೆಂದು ಹೇಳುತ್ತಾರೆ ನಿರ್ದೇಶಕ ಪ್ರತಾಪ್ ರಾಜ್. ಚಿತ್ರಕ್ಕೆ ರಿಜೋ ಪಿ. ಜಾನ್ ಛಾಯಾಗ್ರಹಣ ಮಾಡಿದ್ದಾರೆ. ವೆಂಕಿ ಸಂಗೀತ ಸಂಯೋಜನೆಯಿದ್ದು, ಭರತ್ ಕಡೂರು ಸಾಹಿತ್ಯವಿದೆ. ನವೀನ್ ಕುಮಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಷ್ಣು ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಶರತ್ ಲೋಹಿತಾಶ್ವ, ಬಾಲ ರಾಜ್ವಾಡಿ, ಸಿದ್ದರಾಜ್ ಕಲ್ಯಾಣ್ಕರ್, ಹಾಸ್ಯ ನಟ ಅಮಿತ್ ಹಾಗೂ ಸ್ವಾತಿ ಕೂಡ ಚಿತ್ರದ ಪ್ರಮುಖ ಪಾತ್ರಧಾರಿಗಳು.