ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷಿತ ಚಿತ್ರ ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ರಂಗನಾಯಕನ ಅವತಾರದಲ್ಲಿ ಕಾಮಿಡಿ ಕಿಂಗ್ ಜಗ್ಗೇಶ್ ನಟಿಸಿದ ಪೋಸ್ಟರ್ ವಿಡಿಯೋವೊಂದು ಬಿಡುಗಡೆಯಾಗಿದೆ. ಇದೀಗ ಈ ಚಿತ್ರದ ಫ‌ಸ್ಟ್‌ ಟೀಸರ್‌  ಹೊರಬಿದ್ದಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರದ ನಿರ್ದೇಶಕ ಗುರುಪ್ರಸಾದ್‌, ನಟ ಜಗ್ಗೇಶ್‌, ನಿರ್ಮಾಪಕ ವಿಖ್ಯಾತ್‌, ಶಶಿಧರ್‌, ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌, ಛಾಯಾಗ್ರಹಕ ಮನೋಹರ್‌ ಜೋಶಿ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ರಂಗನಾಯಕ’ನ ಟೀಸರ್‌ ಬಿಡುಗಡೆಯಾಯಿತು.


ಇದೇ ಸಂದರ್ಭದಲ್ಲಿ ನಿರ್ದೇಶಕ ಮಠ ಗುರುಪ್ರಸಾದ್‌ ಮತ್ತು ತಂಡವನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಮಾತಿಗಿಳಿದ ನಟ ಜಗ್ಗೇಶ್‌, “ನಾನು ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದರೂ, ಇಂದಿಗೂ ಜನ ಗುರುತಿಸುವುದು “ಮಠ’ ಮತ್ತು “ಎದ್ದೇಳು ಮಂಜುನಾಥ’ ಚಿತ್ರಗಳ ಮೂಲಕ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಆ ಚಿತ್ರಗಳನ್ನ, ಅದನ್ನು ನಿರ್ದೇಶಿಸಿದ ಗುರುಪ್ರಸಾದ್‌ ಅವರನ್ನು ಎಂದಿಗೂ ಮರೆಯುವಂತಿಲ್ಲ. ಆದರೆ ಕೆಲವೊಂದು ಭಿನ್ನಾಭಿಪ್ರಾಯಗಳು ಇಷ್ಟು ವರ್ಷ ನಮ್ಮಿಬ್ಬರನ್ನು ದೂರ ಮಾಡುವಂತೆ ಮಾಡಿತು. ಈಗ ಹಿಂದಿನದ್ದನ್ನೆಲ್ಲ ಮರೆತು ಕನ್ನಡ ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ಮತ್ತೆ ಒಂದಾಗಿದ್ದೇವೆ. ಸದ್ಯ ಅದ್ಭುತವಾದ ಚಿತ್ರವನ್ನ ಕೊಡೋದಷ್ಟೇ ನಮ್ಮಿಬ್ಬರ ಗುರಿ.

ಗಂಡ-ಹೆಂಡತಿ, ಮನೆ-ಸಂಸಾರ ಅಂದಮೇಲೆ ದೊಡ್ಡವರಿಗೆ “ನಾನು’ ಅನ್ನೋದು ಇರುತ್ತೆ. ಕೆಲವೊಮ್ಮೆ ಒಂದು ಮಾತು ಬರುತ್ತೆ, ಹೋಗುತ್ತೆ. ಅದನ್ನೆಲ್ಲ ಬದಿಗಿಟ್ಟು ಮುಂದೆ ಹೋಗಬೇಕು. ನನ್ನ ಮತ್ತು ಗುರುಪ್ರಸಾದ್‌ ವಿಚಾರದಲ್ಲೂ ಹಾಗೇ ಆಗಿರುವುದು’ ಎಂದರು.  ಇದೇ ವೇಳೆ ಚಿತ್ರಗಳಲ್ಲಿ ನಿರ್ದೇಶಕನ ಮಹತ್ವದ ಬಗ್ಗೆ ಮಾತನಾಡಿ ಜಗ್ಗೇಶ್‌, “ನಮ್ಮನ್ನು ಒಬ್ಬ ಕಲಾವಿದನನ್ನಾಗಿ ಗುರುತಿಸುವಂತೆ ಮಾಡೋದು ಒಬ್ಬ ನಿರ್ದೇಶಕ. ಅವರಿಲ್ಲದಿದ್ದರೆ, ಇವತ್ತು ನಾವಿಲ್ಲಿ ಇರೋದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಅಂಥ ನಿರ್ದೇಶಕರಿಗೆ ದಯವಿಟ್ಟು ಗೌರವ ಕೊಡಿ’ ಎಂದರು. “ನಿರ್ದೇಶಕರು ಇದ್ದರೇ ಕಲಾವಿದರು. ನಿರ್ದೇಶಕನನ್ನು ಎಷ್ಟು ಮುಂದೆ ಬಿಡುತ್ತೀರೋ, ಅವನು ನಿಮ್ಮನ್ನು ಅಷ್ಟು ಮೆರೆಸುತ್ತಾನೆ. ಅದಕ್ಕೆ ಯಾವತ್ತೂ ಕೂಡ ನಿರ್ದೇಶಕನಿಗೆ ಗೌರವ ನೀಡಬೇಕು’ ಎಂದು ನಾಯಕ ನಟರಿಗೆ ತಿಳಿಸಿದರು.


Find out more: