ಕ್ರಿಕೆಟರ್ಸ್ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ತಮಿಳು ಚಿತ್ರದ ಮೂಲಕ ಸಿನಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕ ಆರ್. ಅಜಯ್ ಜ್ಞಾನಮುತ್ತು ಅವರ ಮುಂಬರುವ ಸಿನಿಮಾ ‘ವಿಕ್ರಮ್ 58’ರಲ್ಲಿ ಇರ್ಫಾನ್ ಪಠಾಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ‘ಡಿಕ್ಕಿಲುನಾ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಮಾಹಿತಿಯನ್ನು ಆಟಗಾರರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋವನ್ನು ಟ್ವೀಟ್ ಮಾಡಿರುವ ಇರ್ಫಾನ್, “ಹೊಸ ಕೆಲಸ ಮತ್ತು ಹೊಸ ಸವಾಲಿಗೆ ಸಿದ್ಧವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅಂಕಿ ಅಂಶಗಳನ್ನು ತಿಳಿಸಿದ್ದಾರೆ. ಮತ್ತೊಂದೆಡೆ ಹರ್ಭಜನ್ ಟ್ವೀಟ್ ಮಾಡಿ, ‘ಡಿಕ್ಕಿಲುನಾ’ ಚಿತ್ರದ ಶೀರ್ಷಿಕೆಯ ಹೆಸರಿನೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾನು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ನಿರ್ಮಾಣ ತಂಡಕ್ಕೆ ಧನ್ಯವಾದಗಳು. ಈ ಸಂಬಂಧಗಳನ್ನು ವಿವರಿಸಲು ನನಗೆ ಪದಗಳಿಲ್ಲ ಎಂದು ಹರ್ಭಜನ್ ಬರೆದುಕೊಂಡಿದ್ದಾರೆ. ‘ಡಿಕ್ಕಿಲುನಾ’ ಸಿನಿಮಾವನ್ನು ಕಾರ್ತಿಕ್ ಯೋಗಿ ನಿರ್ದೇಶಿಸುತ್ತಿದ್ದಾರೆ.
ಇರ್ಫಾನ್ ಪಠಾಣ್ 2003ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. 2008ರ ಏಪ್ರಿಲ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಇರ್ಫಾನ್ ಶ್ರೀಲಂಕಾ ವಿರುದ್ಧ ಆಡಿದ ಕೊನೆಯ ಪಂದ್ಯ ಆಗಸ್ಟ್ 2012ರಲ್ಲಿ. ಇರ್ಫಾನ್ 29 ಟೆಸ್ಟ್ ಪಂದ್ಯಗಳಲ್ಲಿ 1,105 ರನ್ ಗಳಿಸಿದ್ದಾರೆ ಮತ್ತು ಅವರ ವೃತ್ತಿಜೀವನದಲ್ಲಿ 100ವಿಕೆಟ್ ಪಡೆದಿದ್ದಾರೆ. 120ಏಕದಿನ ಪಂದ್ಯಗಳಲ್ಲಿ 1,544 ರನ್ ಗಳಿಸಿ 173 ವಿಕೆಟ್ ಪಡೆದಿದ್ದಾರೆ. ಇರ್ಫಾನ್ ಪಠಾಣ್ 24ಟಿ-20ಗಳಲ್ಲಿ ಆಡಿದ್ದು, 172ರನ್ ಗಳಿಸಿ, 28 ವಿಕೆಟ್ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಮಾರ್ಚ್ 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಹರ್ಭಜನ್ ಕೊನೆಯದಾಗಿ 2015ರ ಆಗಸ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು.