ಟೀಂ ಇಂಡಿಯಾದ ಖ್ಯಾತ ಬೌಲರ್ ಇರ್ಫಾನ್ ಪಠಾಣ್ ಇದೀಗ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದು, ಕಾಲಿವುಡ್ ನಲ್ಲಿ ತಮ್ಮ ಮೊದಲ ಚಿತ್ರ ಪ್ರಾರಂಭಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಟಿಯನ್ನು ಆಯ್ಕೆ ಮಾಡಿದ್ದು ಅದು ಬೇರಾರು ಅಲ್ಲ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ. ಈ ಚಿತ್ರದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ತಮಿಳಿನ ಖ್ಯಾತ ನಟ ವಿಕ್ರಂ ಅವರ ಜೊತೆ ‘ವಿಕ್ರಂ 58’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಂ 25 ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಶೇಷವೆನೆಂದರೆ ಈ ಚಿತ್ರದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ನಟಿಸುತ್ತಿದ್ದಾರೆ. ಇರ್ಫಾನ್ ಪಠಾಣ್ ಈ ಚಿತ್ರದಲ್ಲಿ ಟರ್ಕಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಿಧಿ ನಟಿಸುತ್ತಾರೆ ಎಂಬ ಗಾಸಿಪ್ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಶ್ರೀನಿಧಿ ಶೆಟ್ಟಿ ಟ್ವೀಟ್ ಮಾಡುವ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ.
ಶ್ರೀನಿಧಿ ತಮ್ಮ ಟ್ವಿಟ್ಟಿರಿನಲ್ಲಿ, ವಿಕ್ರಂ 58ರಲ್ಲಿ ನಟಿಸುತ್ತಿರುವುದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಈ ಅವಕಾಶ ನೀಡಿದ ಅಜಯ್ ಜ್ಞಾನಮುತ್ತು ಹಾಗೂ ಲಲಿತ್ ಕುಮಾರ್ ಗೆ ಧನ್ಯವಾದಗಳು. ವಿಕ್ರಂ ಸರ್ ಅವರ ಜೊತೆ ನಟಿಸಲು ಪುಣ್ಯ ಮಾಡಿದ್ದೇನೆ. ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ತುಂಬಾ ಉತ್ಸುಕಳಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಸೆವೆನ್ ಸ್ಟುಡಿಯೋ ಬ್ಯಾನರ್ ನಡಿ ಈ ಚಿತ್ರವನ್ನು ಲಲಿತ್ ಕುಮಾರ್ ನಿರ್ಮಿಸುತ್ತಿದ್ದು, ಅಜಯ್ ಜ್ಞಾನಮುತ್ತು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ. ಇನ್ನು ಚಿತ್ರದಲ್ಲಿ ನಟಿಸುತ್ತಿರುವ ಉಳಿದ ಕಲಾವಿದರ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿ, “ಹೊಸ ಕೆಲಸ ಮತ್ತು ಹೊಸ ಸವಾಲಿಗೆ ಸಿದ್ಧವಾಗಿದ್ದೇನೆ” ಎಂದು ಬರೆದು ಒಂದು ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅಂಕಿ ಅಂಶಗಳನ್ನು ತಿಳಿಸಿದ್ದರು.