ಟೈಟಲ್ ಮೂಲಕವೇ ಸಿನಿ ರಸಿಕರಿಗೆ ಕುತೂಹಲ ಕೆರಳುವಂತೆ ಮಾಡಿತ್ತು ಅಂದವಾದ ಚಿತ್ರ. ಇದೀಗ ಥಿಯೇಟರ್ ಗಳಲ್ಲಿ ಶಿಳ್ನೆಗಳನ್ನು ಹಾಕಿಸುತ್ತಿದೆ ಅಂದವಾದ ಚಿತ್ರ. ಚಿತ್ರದ ಹೆಸರೇ ಅಂದವಾದ. ಅದರಂತೆ ಚಿತ್ರವು ಸಹ ಅಂದವಾಗಿ ಮೂಡಿಬಂದಿದೆ.  ಮಳೆಗಾಲದ ಚಿತ್ರವಿದಾಗಿದೆ. ಒಂದೊಂದು ಬಾರಿ ಜಿಟಿಜಿಟಿ, ಮತ್ತೊಂದು ಭಾರೀ ಜಡಿಮಳೆ. ನಮ್ಮೊಳಗೆ ಈ ಮಳೆ ಇಳಿಯಬೇಕು ಅಂದರೆ ನಾವು ಅದರಗುಂಟ ಸಾಗಬೇಕು, ಮೈ ಜತೆ ಮನಸ್ಸೂ ಒದ್ದೆಯಾಗಬೇಕು.

ಅಂದವಾದ ಸಿನಿಮಾದಲ್ಲಿ ಇಂಥದ್ದೊಂದು ಕಾಡುವ ಕಥೆಯಿದೆ. ಸಿನಿಮಾದ ಮೊದಲರ್ಧ ಜಿಟಿಜಿಟಿ. ದ್ವಿತೀಯಾರ್ಧದಲ್ಲಿ ಜಡಿಮಳೆ. ಮಳೆ ನಿಂತ ಮೇಲೂ ಮಳೆಹನಿ ನಿಲ್ಲದೆ ಹೃದಯ ತೇವಗೊಳಿಸುತ್ತಲೇ ಇರುತ್ತದೆ. ಆ ರೀತಿಯ ತಾಜಾ ಅನಿಸುವಂಥ ಕಥೆಯನ್ನು ತಮ್ಮ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕ ಚಲ. ಕಥಾ ನಾಯಕಿ ಅಮ್ಮು (ಅನುಷಾ ರಂಗನಾಥ್‌). ಮಹಾನ್‌ ಸುಳ್ಳುಗಾರ್ತಿ ಅಲ್ಲದಿದ್ದರೂ, ಸಿನಿಮಾದುದ್ದಕ್ಕೂ ಸಣ್ಣ ಸಣ್ಣ ಸುಳ್ಳು ಹೇಳುತ್ತಲೇ ಸಾಗುತ್ತಾಳೆ. ಕಥಾ ನಾಯಕ ಮೋಹನ್‌ (ಜೈ) ಈ ಸುಳ್ಳುಗಳಿಗೆ ಬಲಿಪಶು. ಅಮ್ಮು ಹೇಳುವ ಪ್ರತಿ ಮಾತೂ ಸತ್ಯ ಎಂದುಕೊಳ್ಳುತ್ತಲೇ ಅವಳನ್ನು ಪ್ರೀತಿಸೋಕೆ ಶುರು ಮಾಡುತ್ತಾನೆ.

ಆಕೆ ಸುಳ್ಳು ಹೇಳುವುದಕ್ಕೆ ಒಂದು ಬಲವಾದ ಕಾರಣವಿದೆ. ಅಲ್ಲದೇ, ಆ ಸುಳ್ಳಿನಿಂದ ಮೋಹನ್‌ಗೆ ತೊಂದರೆ ಆಗದೇ ಇರುವ ಕಾರಣಕ್ಕಾಗಿ ಅವನು ಪ್ರಶ್ನೆ ಮಾಡದೇ ಒಪ್ಪುತ್ತಲೇ ಹೋಗುತ್ತಾನೆ. ಅಲ್ಲೊಂದು ಕ್ಯೂಟ್‌ ಲವ್‌ಸ್ಟೋರಿ ಶುರುವಾಗುತ್ತದೆ. ಹಸಿರು ತಾಣ, ಸುಂದರ ಹುಡುಗಿ, ಮುದ್ದಾದ ಹುಡುಗ, ಜಿಟಿಜಿಟಿ ಮಳೆ, ಮೆಲೊಡಿ ಗೀತೆ, ತುಂಟತನದ ಮಾತು, ಹಸಿ ಹಸಿ ಭಾವನೆಗಳು ಸಿನಿಮಾದುದ್ದಕ್ಕೂ ಸಿಗುತ್ತವೆ. ಹಾಗಾಗಿ ಇಡೀ ಸಿನಿಮಾ ಫ್ರೆಶ್‌ ಆಗಿ ಮೂಡಿ ಬಂದಿದೆ.


ಸಿನಿಮಾ ಶುರುವಾಗುವುದು ಮುದ್ದಾದ ಇಬ್ಬರು ಮಕ್ಕಳ ಮೂಲಕ. ಅಮ್ಮು ಮತ್ತು ಮೋಹನ್‌ ಚಿಕ್ಕಂದಿನಿಂದಲೂ ಕ್ಲಾಸ್‌ಮೆಟ್‌. ಈ ದೃಶ್ಯಗಳನ್ನು ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ ನಿರ್ದೇಶಕರು. ಈ ಪಾತ್ರ ಮಾಡಿದ ಇಬ್ಬರೂ ಮಕ್ಕಳು ಮುದ್ದಾಗಿ ನಟಿಸಿದ್ದಾರೆ. ಈ ಮಕ್ಕಳು ದೊಡ್ಡವರಾದ ನಂತರ ಜೈ ಮತ್ತು ಅನುಷಾ ಕಾಣಿಸುತ್ತಾರೆ. ಈ ಇಬ್ಬರೂ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿರೀಕ್ಷೆ ಮಾಡದೇ ಇರುವಂಥ ಕಥೆ ಅನಾವರಣಗೊಳ್ಳುತ್ತದೆ. ಅಲ್ಲೀವರೆಗೂ ಪ್ರೇಕ್ಷಕರು ಕಾಯಲೇಬೇಕು.


Find out more: