ನವದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಅಯೋಧ್ಯೆ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನವೆಂಬರ್ 9ರಂದು ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪನ್ನು ಇಡೀ ದೇಶವೇ ಒಪ್ಪಿ ಅಪ್ಪಿಕೊಂಡಿತ್ತು. ಆದರೆ ಇದೀಗ ಮತ್ತೇ ತೀರ್ಪಿನ ಬಗ್ಗೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಜಮೈತ್ ಉಲಾಮಾ ಏ ಹಿಂದ್ ರಿವ್ಯೂ ಪಿಟಿಷನ್ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ನವೆಂಬರ್ 9ರಂದು ಕೊಟ್ಟ ತೀರ್ಪಿನ ಮರುಪರಿಶೀಲನೆ ಕೋರಿ ಜಮೈತ್ ಉಲಾಮಾ ಏ ಹಿಂದ್ ಸೋಮವಾರ ರಿವ್ಯೂ ಪಿಟಿಷನ್ ಸಲ್ಲಿಸಿದೆ. ಪಿಟಿಷನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜಮೈತ್ ಉಲಾ ಏ ಹಿಂದ್ನ ಅಧ್ಯಕ್ಷ ಮೌಲಾನಾ ಸೈಯದ್ ಅಷದ್ ರಷಿದಿ, ಪೂರ್ಣ ತೀರ್ಪನ್ನು ಪ್ರಶ್ನಿಲಾಗುತ್ತಿಲ್ಲ. ಬದಲಾಗಿ, ಜಮೀನು ಹಂಚಿಕೆ ವಿಚಾರದಲ್ಲಿ ಆಗಿರುವ ತಾರತಮ್ಯವನ್ನು ಮರುಪರಿಶೀಲಿಸುವಂತೆ ಕೋರಲಾಗಿದೆ.
ಅದೇ ರೀತಿ, ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ವಾದ ಇತ್ತು. ಅಂತಹ ಯಾವುದೇ ಕುರುಹುಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಆ ಭೂಮಿ ಮೇಲಿನ ಮುಸ್ಲಿಮರ ಹಕ್ಕು ಖಾತರಿಯಾದಂತೆ ಆಗಿದೆ. ಈ ವಿಚಾರವನ್ನು ನವೆಂಬರ್ 14ರಂದು ಜಮೈತ್ನ ಕಾರ್ಯಕಾರಿ ಸಮಿತಿ ರಚಿಸಿದ ಐವರು ಕಾನೂನು ಪರಿಣತರ ತಂಡ ಗುರುತಿಸಿದ್ದು, ರಿವ್ಯೂ ಪಿಟಿಷನ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂವಿಧಾನದ 137ನೇ ಅನುಚ್ಛೇದ ಪ್ರಕಾರ ಈ ಪಿಟಿಷನ್ ಸಲ್ಲಿಸಲಾಗಿದೆ. ಜಮೈತ್ ಉಲಾಮಾ ಏ ಹಿಂದ್ನ ಅಧ್ಯಕ್ಷ ಮೌಲಾನಾ ಸೈಯದ್ ಅಷದ್ ರಷಿದಿ ಈ ವಿವಾದ ಪ್ರಕರಣದಲ್ಲಿ ಮೂಲ ದಾವೆದಾರರಾಗಿದ್ದ ಎಂ.ಸಿದ್ಧಿಕಿ ಅವರ ವಾರಸುದಾರ.
ಪ್ರಸ್ತುತ ರಾಷ್ಟ್ರ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ ಪರಿ ಕಂಡು ಬೆರಗಾಗುವಂತಿತ್ತು. ಆದರೆ ಇದೀಗ ಮತ್ತೆ ಅಯೋಧ್ಯೆಯ ಬಾಬ್ರಿ ಮಸೀದಿಯ ಹೋಸ ಅಧ್ಯಾಯ ವೊಂದು ಶುರುವಾದಂತೆ ಕಾಣುತ್ತಿದೆ. ಜನರೇ ಒಪ್ಪಿ ಸ್ವೀಕರಿಸಿದ ಮೇಲೆ ಮತ್ತೇನು ಎಂಬ ಪ್ರಶ್ನೆಗಳು ಸಹ ಉದ್ಭವಿಸಿದ್ದು, ಸುಪ್ರೀಂ ಕೋರ್ಟ್ ಮತ್ತೇ ಏನು ಹೇಳುತ್ತದೆ ಎಂಬುದು ಇದೀಗ ಭಾರೀ ಕುತೂಹಲ ಮೂಡಿಸಿದೆ.