ಸಿನಿಮಾ ವಿಮರ್ಶೆ:
 
ಚಿತ್ರ: ಅವನೇ ಶ್ರೀಮನ್ನಾರಾಯಣನ
ನಟ: ರಕ್ಷಿತ್ ಶೆಟ್ಟಿ
ನಟಿ:ಶಾನ್ವಿ ಶ್ರೀವಾಸ್ತವ್
ತಾರಾಗಣ: ಬಾಲಾಜಿ ಮನೋಹರ್, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂಧನ್ ರಾವ್. 
ರೇಟಿಂಗ್: 4/5
 
ನಾಟಕ ಮಂಡಳಿಯ ಸದಸ್ಯರು ಅಗಾಧ ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗುವಾಗ ಅಮರಾವತಿ ಎಂಬ ಕಾಲ್ಪನಿಕ ಊರಿನಲ್ಲಿ ಡಕಾಯಿತರ ಗುಂಪೊಂದಕ್ಕೆ ಸಿಕ್ಕಿ ಬೀಳುತ್ತಾರೆ. ಆ ಸಂಪತ್ತನ್ನು ತಮ್ಮದಾಗಿಸಿಕೊಳ್ಳಲು ನಾಟಕ ಕಂಪನಿಯವರನ್ನು ಗುಂಡಿಕ್ಕಿ ಕೊಲ್ಲುವ ಆ ದರೋಡೆಕೋರರಿಗೆ ಅದು ಸಿಗುವುದಿಲ್ಲ, ಅದನ್ನು ನಾಟಕ ಕಂಪನಿಯವರು ಬಚ್ಚಿಟ್ಟಿರುತ್ತಾರೆ. ಅದರ ಹುಡುಕಾಟವೇ ಸಿನಿಮಾದ ಒಟ್ಟಾರೆ ಕಥೆ. ಈ ಕಥೆಯಲ್ಲಿ ನಾರಾಯಣ ಯಾರು? ಆಕೆಯ ಪ್ರಿಯತಮೆ ಲಕ್ಷ್ಮಿಯ ಪಾತ್ರವೇನು? ಆ ಸಂಪತ್ತು ಸಿಗುತ್ತದಾ? ಇಲ್ಲವಾ? ಎಂಬೆಲ್ಲ ಪ್ರಶ್ನೆಗಳಿಗೆ ಸಿನಿಮಾ ನೋಡಿಯೇ ಉತ್ತರ ಪಡೆದುಕೊಳ್ಳಬೇಕು. 
 
ಸಿನಿಮಾದಲ್ಲಿನ ಆ ಸಂಪತ್ತನ್ನು ಹುಡುಕುವ ಆ ಪ್ರಯತ್ನದಲ್ಲಿ ನಾರಾಯಣನ ಚೇಷ್ಟೆಗಳು ಪ್ರೇಕ್ಷಕನನ್ನು ರಂಜಿಸುತ್ತವೆ. ವಿಭಿನ್ನ ರೀತಿಯ ಮೇಕಿಂಗ್‌, ಬೃಹತ್‌ ಸೆಟ್‌ಗಳು ಮತ್ತು ಸಂಗೀತ ಸಿನಿಮಾದ ಹೈಲೈಟ್‌ಗಳು. ಇಡೀ ತಂಡದ ಶ್ರಮ ತೆರೆಯ ಮೇಲಿನ ವಿಶ್ಯುಯಲ್‌ ಟ್ರೀಟ್‌ಮೆಂಟ್‌ನಲ್ಲಿ ಗೊತ್ತಾಗುತ್ತದೆ. ಇಡೀ ಸಿನಿಮಾ ರೆಟ್ರೋ ಯುಗದಲ್ಲಿ ನಡೆಯುವುದರಿಂದ ನಿರ್ದೇಶಕರು ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.ಆದರೆ ಕೆಲವೊಂದು ಕ್ಷಣಗಳು ಮಾತ್ರ ಸ್ವಲ್ಪ ಬೇಸರ ತರಿಸುತ್ತವೆ. ಸಿನಿಮಾಟೋಗ್ರಫರ್‌ ಕರಂ ಚಾವ್ಲಾ, ಸಂಗೀತ ನಿರ್ದೇಶಕರಾದ ಚರಣ್‌ರಾಜ್‌, ಅಜನೀಶ್‌ ಲೋಕನಾಥ್‌, ಕಲಾ ನಿರ್ದೇಶಕ ಮತ್ತು ಸಾಹಸ ನಿರ್ದೇಶಕ ಇವರೆಲ್ಲರೂ ಸಿನಿಮಾವನ್ನು ಬೇರೆಯದೇ ಮಟ್ಟದಲ್ಲಿ ನಿಲ್ಲಿಸಿದ್ದಾರೆ.
 
ರಕ್ಷಿತ್‌ ಶೆಟ್ಟಿ ತಮ್ಮೆಲ್ಲ ಶ್ರಮವನ್ನು ಹಾಕಿ ನಾರಾಯಣನ ಅವತಾರವೆತ್ತಿದ್ದು, ತಮ್ಮ ವಿಭಿನ್ನ ಶೈಲಿಯ ಮ್ಯಾನರಿಸಂನಿಂದ ಅಲ್ಲಲ್ಲಿ ಕಚಗುಳಿ ಇಡುತ್ತಾರೆ. ಶಾನ್ವಿ ಶ್ರೀವಾಸ್ತವ ಇದುವರೆಗಿನ ಬೆಸ್ಟ್‌ ಪರ್ಫಾಮೆನ್ಸ್‌ ಎಂದು ಹೇಳಲೇಬೇಕಾಗುತ್ತದೆ. ಬಾಲಾಜಿ ಮನೋಹರ್‌ ಕಣ್ಣಲ್ಲೇ ಸುಟ್ಟರೆ, ಪ್ರಮೋದ್‌ ಶೆಟ್ಟಿ ಅವರದ್ದು ತಣ್ಣಗಿನ ಅಭಿನಯ.ಅಚ್ಯುತ್‌ಕುಮಾರ್‌ ಲವಲವಿಕೆಯ ನಟನೆಯಿಂದ ಗಮನ ಸೆಳೆದರೆ, ಗೋಪಾಲಕೃಷ್ಣ ದೇಶಪಾಂಡೆ ಮೌನವಾಗಿದ್ದುಕೊಂಡೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ. ಅಶ್ವಿನ್‌ ಹಾಸನ್‌, ಕಿರಣ್‌ ನಾಯಕ್‌, ವಿಜಯ್‌ ಚೆಂಡೂರು ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

Find out more: