ಏಳು ಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗುತ್ತಿರುವ ಬೆಸ್ಟ್ ರಿಯಲ್ ಸ್ಟಾರ್ ನಟ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಬಹು ವಿಶೇಷವಾಗಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್‌ ಇಂಡಿಯಾ ಸದ್ದು ಜೋರಾಗಿದೆ. ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಇದೀಗ ಉಪ್ಪಿ ಮಾತನಾಡಿದ್ದು, ಏನ್ ಹೇಳಿದ್ದಾರೆ ಎಂಬುದು ಇಲ್ಲಿದೆ ನೋಡಿ. 
 
 ಈಗ ಉಪೇಂದ್ರ ಅವರ “ಕಬ್ಜ’ ಕೂಡಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದೆ. ಹಾಗಾದರೆ ಉಪೇಂದ್ರ ಪ್ರಕಾರ ಪ್ಯಾನ್‌ ಇಂಡಿಯಾ ಸಿನಿಮಾ ಎಂದರೇನು? ಉಪ್ಪಿ ಇದನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಾರೆ. “ಒಳ್ಳೆಯ ಕಥೆ, ಮೇಕಿಂಗ್‌ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್‌ ಇಂಡಿಯಾ’ ಎನ್ನುವುದು ಉಪೇಂದ್ರ ಮಾತು. “ಇವತ್ತು ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಹೊರಟಿದ್ದೇನೆ.
 
ಆದರೆ ಒಳ್ಳೆಯ ಕಥೆ, ನಿರೂಪಣೆ ಇರುವ ಸಿನಿಮಾಗಳು ಯಾವತ್ತಿಗೂ ಪ್ಯಾನ್‌ ಇಂಡಿಯಾನೇ. ಅಣ್ಣಾವ್ರ ಸಿನಿಮಾದಿಂದ ಹಿಡಿದು ಸಾಕಷ್ಟು ನಟರ ಸಿನಿಮಾಗಳನ್ನು ಎಲ್ಲಾ ಭಾಷೆಯ ಜನ ಆಗಲೇ ನೋಡಿ ಮೆಚ್ಚಿದ್ದಾರೆ. ಕಲೆಗೆ ಭಾಷೆಯ ಬೇಲಿ ಇಲ್ಲ. ಯಾವ ಸಿನಿಮಾಕ್ಕೆ ಮನರಂಜಿಸುವ, ಜನರನ್ನು ತನ್ನತ್ತ ಸೆಳೆಯುವ ಗುಣವಿದೆಯೋ ಆ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗುತ್ತದೆ’ ಎನ್ನುತ್ತಾರೆ ಉಪೇಂದ್ರ. ಇನ್ನು, ಉಪೇಂದ್ರ ಅವರಿಗೆ “ಕಬ್ಜ’ ಹೊಸ ಅನುಭವವಂತೆ. “ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಂತೆ ಭಾಸವಾಗುತ್ತಿದೆ.
 
ನಿರ್ದೇಶಕ ಚಂದ್ರು ಆ ತರಹದ ಒಂದು ಸೆಟಪ್‌ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ಇಡೀ ತಂಡ ಒಂದೊಂದು ದೃಶ್ಯವನ್ನೂ ಎಂಜಾಯ್‌ ಮಾಡುತ್ತಿದೆ. ಈ ಹಿಂದೆ “ಓಂ’ ಮಾಡುವಾಗ ನಾವು ಇದೇ ರೀತಿ ಎಂಜಾಯ್‌ ಮಾಡಿ, ಶೂಟ್‌ ಮಾಡಿದ್ದೆವು. ಅದು ಮತ್ತೆ “ಕಬ್ಜ’ ಸೆಟ್‌ ನಲ್ಲಿ ನೆನಪಿಗೆ ಬಂತು. ಕಥೆ, ಮೇಕಿಂಗ್‌, ಸೆಟ್‌ ಎಲ್ಲವೂ ವಿಭಿನ್ನವಾಗಿದೆ’ ಎನ್ನುವುದು ಉಪೇಂದ್ರ ಮಾತು. 
 
ಚಿತ್ರಕ್ಕೆ ಮುಖ್ಯವಾಗಿ ಕಂಟೆಂಟ್ ಜೊತೆಗೆ ಜನರನ್ನು ಸೆಳೆಯುವುದು ಮುಖ್ಯ. ಜನರನ್ನು ಮನರಂಜಿಸುವ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗುತ್ತವೆ ಎಂದಿರುವ ಉಪೇಂದ್ರ ತಮ್ಮ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

Find out more: