ಬೆಂಗಳೂರು: ಬಾಹುಬಲಿ ಯಂತಹ ಬ್ಲಾಗ್ ಬ್ಲಾಸ್ಟರ್ ಸಿನಿಮಾವನ್ನು ಪ್ರಪಂಚಕ್ಕೆ ಪರಿಚರಿಯಿದ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರಂತೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರಂತೆಂದು ಹೀಗೊಂದು ಸುದ್ದಿ ಒಂದೆರಡು ದಿನಗಳಿಂದ ಹರಿದಾಡುತ್ತಿತ್ತು. ಅದಕ್ಕೆ ಕಾರಣ ರಾಜ್‌ಮೌಳಿ ಹಾಗೂ ಸುದೀಪ್ ನಡುವಿನ ಸ್ನೇಹ. ರಾಜಮೌಳಿ ನಿರ್ದೇಶನದ 'ಈಗ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದು, ಆ ನಂತರ “ಬಾಹುಬಲಿ- ದಿ ಬಿಗಿನಿಂಗ್’ ನಲ್ಲೂ ಸುದೀಪ್ ನಟಿಸಿದ್ದರು. ಇದೀಗ ಆರ್. ಆರ್. ಆರ್ ಚಿತ್ರದಲ್ಲಿ ನಟಿಸ್ತಾರಾ ಇಲ್ವಾ ಎಂಬುದಕ್ಕೆ ಸ್ಪಷ್ಟತೆ ನೀಡಿದ್ದಾರೆ ಕಿಚ್ಚ ಸುದೀಪ್. ಅದೇನೆಂಬುದು ಇಲ್ಲಿದೆ ನೋಡಿ.
ಲೆಕ್ಕಾಚಾರದೊಂದಿಗೆ “ಆರ್.ಆರ್.ಆರ್’ ಸಿನಿಮಾದಲ್ಲೂ ಸುದೀಪ್ ನಟಿಸುತ್ತಿದ್ದಾರೆಂಬ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಆದರೆ, ಈಗ ಸ್ವತಃ ಸುದೀಪ್ ಆ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿರುವ ಸುದೀಪ್, “ನಾನು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಸಿನಿಮಾದ ಮೇಲೆ ನನಗೆ ಗೌರವವಿದೆ. ಆದರೆ, ಆ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂಬುದು ಸುಳ್ಳು. ಆ ಚಿತ್ರಕ್ಕಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ.
ನನ್ನ ಮತ್ತು ರಾಜ್‌ಮೌಳಿ ನಡುವೆ ಈ ಕುರಿತಾಗಿ ಮಾತುಕತೆ ನಡೆದಿದೆ ಎಂಬುದು ಕೂಡಾ ಸತ್ಯಕ್ಕೆ ದೂರವಾದ ಮಾತು’ ಎನ್ನುವ ಮೂಲಕ ಗಾಳಿಸುದ್ದಿಗೆ ತೆರೆಎಳೆದಿದ್ದಾರೆ. ಕೆಲವು ದಿನಗಳ ಹಿಂದೆಯೂ ಸುದೀಪ್ ತಮಿಳು ಚಿತ್ರವೊಂದರಲ್ಲಿ ನಟಿಸಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಕಾಲಿವುಡ್ ನಟ ಸಿಲಂಬರಸನ್ ಅಭಿನಯದ “ಮಾನಾಡು’ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.
ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್ ಅವರನ್ನು ಭೇಟಿ ಮಾಡಿ, ಕಥೆಯನ್ನು ಹೇಳಿದ್ದು, ಆ ಕಥೆ, ಪಾತ್ರವನ್ನು ಸುದೀಪ್ ಕೂಡ ಒಪ್ಪಿದ್ದಾರಂತೆ ಎಂಬ ಮಾತುಗಳು ಹರಿದಾಡಿದ್ದವು. ಈ ಬಗ್ಗೆಯೂ ಸುದೀಪ್ ತಮ್ಮ ಟ್ವಿಟ್ಟರ್‌ನಲ್ಲಿ “ರಾಂಗ್ ನ್ಯೂಸ್’ ಎನ್ನುವ ಮೂಲಕ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು. ಈಗ “ಆರ್.ಆರ್.ಆರ್’ ಸುದ್ದಿಗೂ ಸುದೀಪ್ ತೆರೆ ಎಳೆದಿದ್ದಾರೆ.