ಬೆಂಗಳೂರು: ಸ್ಯಾಂಡಲ್​ ವುಡ್​ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಹಿಂದೆ ಚೌಕ ಚಿತ್ರದ ಮೂಲಕ ಸಾಕಷ್ಟು ಹೆಸರು ಪಡೆದಿದ್ದರು. ಇದೀಗ ಮಗದೊಮ್ಮೆ ಅದೇ ರೀತಿ ಅಬ್ಬರಿಸಲು ಜಂಟಲ್ ಮನ್ ಅವತಾರ ಎತ್ತಿದ್ದಾರೆ.ಹೌದು ಪ್ರಜ್ವಲ್​ ದೇವರಾಜ್ ನಟನೆಯ ‘ಜಂಟಲ್​ಮನ್’ ಸಿನಿಮಾ ಮುಂದಿನ ವಾರ ತೆರೆಗೆ ಬರಲು ಸಜ್ಜಾಗಿದೆ. ಪಕ್ಕಾ ಕ್ರೈಂ ಥ್ರಿಲ್ಲರ್ ಎಂಟ್ರಟೈನರ್ ಕಥೆಯಾಗಿದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೈಲರ್​ ನಿಂದ ಸಖತ್ ಸದ್ದು ಮಾಡುತ್ತಿದೆ. 
 
ರಾಜಹಂಸ ಖ್ಯಾತಿಯ ಜಡೇಶ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ರಾಜಾಹುಲಿ ಖ್ಯಾತಿಯ ಗುರುದೇಶ್ ಪಾಂಡೆ ಇದೇ ಮೊದಲ ಬಾರಿ ಜಿ ಸಿನಿಮಾಸ್ ಬ್ಯಾನರ್​ನಡಿ ಈ ಸಿನಿಮಾಗೆ ಬಂಡವಾಳ ಹೂಡಿ, ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಚೌಕ ಚಿತ್ರದಿಂದ ಹೊಸ ವರಸೆ ಶುರುವಿಟ್ಟಿದ್ದು, ಜಂಟಲ್​ಮನ್ ಮೂಲಕ ಮತ್ತೊಂದು ದಾಖಲೆಯ ಹಿಟ್ ಬರೆಯುವ ತವಕದಲ್ಲಿದ್ದಾರೆ. ಅಷ್ಟರ ಮಟ್ಟಿಗೆ ಗಮನ ಸೆಳೆದಿವೆ ಸಿನಿಮಾ ಸ್ಯಾಂಪಲ್ಸ್. ಈ ಚಿತ್ರದಲ್ಲಿ ಪ್ರಜ್ವಲ್ ಸ್ಲೀಪಿಂಗ್ ಡಿಸಾರ್ಡರ್​ನಿಂದ ಬಳಲುತ್ತಿರುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
 
ದಿನದಲ್ಲಿ 18 ಗಂಟೆ ಮಲಗಿರುವ ನಾಯಕನಟ ಉಳಿದ ಆರು ಗಂಟೆಯಲ್ಲಿ ಕೆಲಸ, ಪ್ರೀತಿ, ಫ್ಯಾಮಿಲಿ ಹೀಗೆ ಎಲ್ಲವನ್ನೂ ನಿಭಾಯಿಸುತ್ತಾನೆ. ಅದರ ಮಧ್ಯೆ ವುಮೆನ್ ಟ್ರಾಫಿಕಿಂಗ್ ದಂದೆಯ ಜಾಡನ್ನ ಹಿಡಿಯೋದು ಮತ್ತು ತಡೆಯುವ ಪ್ರಯತ್ನದಲ್ಲಿ ನಾಯಕನಟ ಏನೆಲ್ಲಾ ಸಮಸ್ಯಗಳಿಗೆ ಸಿಲುಕಿಕೊಳ್ತಾನೆ ಎನ್ನೋದನ್ನ ತುಂಬಾ ಕೌತುಕವಾಗಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಿದ್ದಾರೆ. ಪಡ್ಡೆಹುಲಿ ಫೇಮ್ ನಿಶ್ವಿಕಾ ನಾಯ್ಡು ಪ್ರಜ್ವಲ್ ಲವರ್ ಪಾತ್ರದಲ್ಲಿ ಮಿಂಚಿಲಿದ್ದಾರೆ. 
 
ನಿರ್ದೇಶನದಿಂದ ನಿರ್ಮಾಪಕನಾಗಿ ಬಡ್ತಿ ಪಡೀತಿರುವ ಗುರುದೇಶ್ ಪಾಂಡೆ ಈ ಸಿನಿಮಾದ ಮೇಕಿಂಗ್ ಹಾಗೂ ಕಂಟೆಂಟ್ ​ನಿಂದ ಗೆಲ್ಲುವ ಸೂಚನೆ ಕೊಟ್ಟಿದ್ದಾರೆ. ಇನ್ನು ಪ್ರಜ್ವಲ್ ಜೀವನದಲ್ಲಿ ಅದ್ಭುತ ಹಿಟ್ ಕೊಡುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಸಂದೇಶ ಈಗಾಗಲೇ ಪಕ್ಕಾ ಆಗಿದೆ. ಪ್ರಜ್ವಲ್ ನಟನೆ, ಸ್ಟೈಲು ಮ್ಯಾನರಿಸಂ, ಸ್ಟಂಟ್ಸ್ ಹೀಗೆ ಎಲ್ಲವೂ ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿದ್ದು, ಇದೇ ಫೆಬ್ರುವರಿ 7ಕ್ಕೆ ರಾಜ್ಯಾದ್ಯಂತ ತೆರೆಗಪ್ಪಳಿಸಲು ಸನ್ನದ್ಧವಾಗಿದೆ.

Find out more: