ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ ಹರ್ಷಿಕಾ ಪೂಣಚ್ಚ ತಮಿಳು ಚಿತ್ರರಂಗಕ್ಕೂ ಇದೀಗ ಪ್ರವೇಶಿಸಿದ್ದು, ಅವರ ಅಭಿನಯದ ಚೊಚ್ಚಲ ತಮಿಳು ಸಿನಿಮಾ ‘ಉನ್ ಕಾದಲ್ ಇರುಂದಾಳ್’ ಫೆ. 28ಕ್ಕೆ ಬಿಡುಗಡೆ ಆಗಲಿದೆ. ಈ ಮೂಲಕ ಚತುರ್ಭಾಷಾ ತಾರೆಯಾದ ಹರುಷದಲ್ಲಿದ್ದಾರೆ ಹರ್ಷಿಕಾ.
‘ಜೆಮಿನಿ’ ಸಂಸ್ಥೆ ಮೂಲಕ ‘ಮರಿಕರ್ ಆರ್ಟ್ಸ್’ ಬ್ಯಾನರ್ ನಲ್ಲಿ ನಿರ್ದೇಶಕ ಹಾಶಿಮ್ ಮರಿಕರ್ ಆಕ್ಷನ್ ಕಟ್ ಹೇಳಿರುವ ‘ಉನ್ ಕಾದಲ್ ಇರುಂದಾಳ್’ ಚಿತ್ರದಲ್ಲಿ ಖ್ಯಾತ ನಟ ದುಲ್ಖರ್ ಸಲ್ಮಾನ್ ಸಹೋದರ ಮಖ್ ಬೂಲ್ ಸಲ್ಮಾನ್ಗೆ ನಾಯಕಿ ಆಗಿ ಹರ್ಷಿಕಾ ನಟಿಸಿದ್ದರು. ಈ ಸಿನಿಮಾದಲ್ಲಿ ನಾನು ಕಾಲೇಜು ವಿದ್ಯಾರ್ಥಿನಿಯಾಗಿ ಅಭಿನಯಿಸಿದ್ದೇನೆ. ತುಂಬ ಚೂಟಿಯಾದ ಪಾತ್ರ ನನ್ನದು. ಕಾಲೇಜ್ಗೆ ಬೈಕ್ನಲ್ಲೇ ಬರುತ್ತೇನೆ, ಲಂಗ ದಾವಣಿ ಕೂಡ ಧರಿಸುತ್ತೇನೆ ಎಂದಿದ್ದಾರೆ ಹರ್ಷಿಕ.
‘ಇದು ಬಹುತಾರಾಗಣದ ಸಿನಿಮಾ. ಮತ್ತೊಂದು ಜೋಡಿಯಾಗಿ ಶ್ರೀಕಾಂತ್ ಹಾಗೂ ಚಂದ್ರಿಕಾ ರವಿ ನಟಿಸಿದ್ದಾರೆ. ಶ್ರೀಕಾಂತ್ ಹಾಗೂ ಚಂದ್ರಿಕಾ ಈ ಸಿನಿಮಾದೊಳಗಿನ ಸಿನಿಮಾದಲ್ಲಿ ನಿರ್ದೇಶಕ ಹಾಗೂ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಾರೆ. ಆ ಸಿನಿಮಾದಿಂದ ನಮ್ಮೆಲ್ಲರ ಮೇಲೆ ಏನು ಪರಿಣಾಮ ಆಗುತ್ತದೆ ಎಂಬುದೇ ಈ ಸಿನಿಮಾದ ಕಥಾಹಂದರ’ ಎಂದು ತಿಳಿಸಿದ್ದಾರೆ.
ಇನ್ನು ಇದೇ ಮೊದಲ ಸಲ ನಾಯಕಿಯಾಗಿ ತಮಿಳು ಚಿತ್ರರಂಗದಿಂದಲೂ ಹೊರಹೊಮ್ಮುತ್ತಿರುವ ಬಗ್ಗೆ ಅವರಿಗೆ ಖುಷಿ ಹಾಗೂ ಬೇಸರ ಒಟ್ಟೊಟ್ಟಿಗೇ ಆಗುತ್ತಿದೆಯಂತೆ. ‘ನಾನು ಈ ಸಿನಿಮಾದ ಶೂಟಿಂಗ್ಗೆ ಹೋಗುವಾಗೆಲ್ಲ ತಂದೆ ಜತೆಗೇ ಬರುತ್ತಿದ್ದರು. ನನ್ನ ಅಭಿನಯ ನೋಡಿ, ನಿನಗೆ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಮೆಚ್ಚುಗೆಯನ್ನೂ ಸೂಚಿಸಿದ್ದರು. ಆದರೆ ಚಿತ್ರದ ಬಿಡುಗಡೆ ಸಮಯದಲ್ಲಿ ಅವರಿಲ್ಲ ಎಂಬ ನೋವು ಕಾಡುತ್ತಿದೆ. ಮೂರು ತಿಂಗಳ ಹಿಂದೆ ಅವರು ನಮ್ಮನ್ನೆಲ್ಲ ಅಗಲಿದರು’ ಎಂದು ಸಂತಸದ ನಡುವೆ ಬೇಸರದ ಸಂಗತಿಯನ್ನೂ ತಿಳಿಸಿದರು.
ಕನ್ನಡ ಚಿತ್ರಗಳಲ್ಲಿ ಪ್ರಸ್ತುತ ಬಿಜಿಯಾಗಿರುವ ಹರ್ಷಿಕಾ ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರವಿಂದ್ ನಿರ್ದೇಶನದ ‘ರೆಡಿ’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಹಾಡಿನ ಚಿತ್ರೀಕರಣ ಆಗಬೇಕಿದೆ. ಜತೆಗೆ ಶರಣ್ ನಿರ್ದೇಶನದ ‘ಓಂ ಪ್ರೇಮ’, ಜಯಸಿಂಹ ನಿರ್ದೇಶನದ ಚಿತ್ರದಲ್ಲಿ ಮಿಂಚೋದು ಖಚಿತವಾಗಿದೆ.