ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪ್ರಸ್ತುತ ಆಲ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೌದು,ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಬೆಳೆದು ನಿಂತ ರೀತಿ ಕಂಡರೆ ಎಂಥವರಿಗೂ ಸ್ಫೂರ್ತಿ ಆಗುತ್ತದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಇಂದು ರಾಷ್ಟ್ರಮಟ್ಟದ ಸೂಪರ್ ಸ್ಟಾರ್ ಆಗಿದ್ದಾರೆ. ಬಾಲಿವುಡ್ ಸ್ಟಾರ್ ನಟರಿಗೂ ಖಡಕ್ ಪೈಪೋಟಿ ನೀಡುವ ಮಟ್ಟಕ್ಕೆ ತಮ್ಮ ಚಾರ್ಮ್ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ಟೈಲ್, ಫ್ಯಾಷನ್ ವಿಚಾರದಲ್ಲೂ ಅವರು ಅನೇಕರಿಗೆ ಮಾದರಿ. ಕರ್ನಾಟಕದಲ್ಲಿ ಅವರ ಸ್ಟೈಲ್ ಫಾಲೋ ಮಾಡುವ ಯುವಕರ ಸಂಖ್ಯೆ ದೊಡ್ಡದಿದೆ. ಅಷ್ಟಕ್ಕೂ ಅವರು ಹೀಗೆ ಸ್ಟೈಲ್ ಐಕಾನ್ ಆಗಿ ಬೆಳೆಯಲು ಕಾರಣವಾದ ಅಂಶ ಏನು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.
'ಕೆಜಿಎಫ್' ಸಿನಿಮಾದಲ್ಲಿ ಯಶ್ ಕಾಣಿಸಿಕೊಂಡ ರೀತಿ ಅದ್ಭುತ. ಉದ್ದವಾದ ಗಡ್ಡ, ಅದಕ್ಕೆ ಸರಿಹೊಂದುವಂತಹ ಕೇಶ ವಿನ್ಯಾಸ, ಖಡಕ್ ಲುಕ್ ಮುಂತಾದ ಅಂಶಗಳಿಂದಾಗಿ ಅವರು ಕೆಜಿಎಫ್ ಸಿನಿಮಾದಲ್ಲಿ ಮಿಂಚಿದರು. ಅದು ಎಷ್ಟರ ಮಟ್ಟಿಗೆ ಫೇಮಸ್ ಆಯಿತು ಎಂದರೆ, ಕರ್ನಾಟಕದಲ್ಲಿ ಮಾತ್ರವಲ್ಲದೆ, ಮುಂಬೈನ ಹುಡುಗಿಯರು ಕೂಡ ಯಶ್ ಲುಕ್ ಬಗ್ಗೆ ಮಾತನಾಡಲು ಶುರುಮಾಡಿದರು. 'ನನಗೆ ಈ ನಟನ ಮೇಲೆ ಕ್ರಷ್ ಆಯಿತು' ಎಂದು ಮಾಧ್ಯಮಗಳ ಕ್ಯಾಮರಾ ಎದುರು ಬಂದು ಹುಡುಗಿಯರು ನಗು ಚೆಲ್ಲಿದರು.
ಟ್ರೆಂಡ್ ಸೃಷ್ಟಿಸುವ ಸಿನಿಮಾಗಳಿಗೂ, ಸಮಾಜದಲ್ಲಿ ಟ್ರೆಂಡ್ ಆಗುವ ಫ್ಯಾಷನ್ ಗೂ ಒಂದು ಕನೆಕ್ಷನ್ ಇದ್ದೇ ಇರುತ್ತದೆ. ಅದು 'ಕೆಜಿಎಫ್' ಚಿತ್ರದ ವಿಚಾರದಲ್ಲಿ ಸಾಬೀತಾಗಿದೆ. ಬೆಳ್ಳಿ ಪರದೆ ಮೇಲೆ ಯಶ್ ಗಡ್ಡ ಬಿಟ್ಟುಕೊಂಡು ಅಬ್ಬರಿಸಿದರೆ, ರಿಯಲ್ ಲೈಫ್ ನಲ್ಲಿ ಅವರ ಅಭಿಮಾನಿಗಳು ಕೂಡ ಉದ್ದನೆಯ ಗಡ್ಡ ಬಿಡಲು ಆರಂಭಿಸಿದರು. 'ಕೆಜಿಎಫ್' ಚಾಪ್ಟರ್ ಒಂದು ಮತ್ತು ಎರಡರ ಶೂಟಿಂಗ್ ಸಲುವಾಗಿ ಹಲವು ತಿಂಗಳುಗಳ ಕಾಲ ಯಶ್ ಅದೇ ಗೆಟಪ್‌ನಲ್ಲಿ ಮುಂದುವರಿಯಬೇಕಾಯಿತು. ಹಾಗಾಗಿ ನಿಜಜೀವನದಲ್ಲೂ ಅವರು ಗಡ್ಡದ ಲುಕ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಇದೀಗ ಆಲ್ ಇಂಡಿಯಾ ಸ್ಟಾರ್ ಆಗಿ ರಾಕಿ ಭಾಯ್ ಮಿಂಚುತ್ತಿದ್ದಾರೆ.