ಬೆಂಗಳೂರು: ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುಲ್ವಾಮಾ ದಾಳಿಯ ಪ್ರತೀಕಾರದ ದಾಳಿಯಲ್ಲಿ ಹೀರೋ ಆದ ಅಭಿನಂದನ್ ಆಗ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. 
 
ಡಿ ಬಾಸ್ ದರ್ಶನ್ ಅಭಿನಯದ “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ. ಅದೇ ವೇದಿಕೆಯಲ್ಲಿ ಮುನಿರತ್ನ ದೊಡ್ಡ ಮೊತ್ತದ ಬಂಡವಾಳ ಹೂಡಿ ಮತ್ತೊಂದು ಹೊಸ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಅದು ಬೇರಾರದ್ದು ಅಲ್ಲ, ಕಮಾಂಡರ್ ಮೇಜರ್‌ ಅಭಿನಂದನ್‌ ವರ್ಧಮಾನ್‌ ಅವರ ಜೀವನ ಆಧರಿಸಿದ ಚಿತ್ರ ಮಾಡಲು ಮುನಿರತ್ನ ಉತ್ಸಾಹದಲ್ಲಿದ್ದಾರೆ. ಆ ಚಿತ್ರದಲ್ಲಿ ದರ್ಶನ್‌ ಅವರು ಅಭಿನಂದನ್‌ ಪಾತ್ರ ನಿರ್ವಹಿಲಿದ್ದಾರಂತೆ.
 
ಆಶ್ಚರ್ಯವಾದರೂ ಸಹ ಈ ಸುದ್ದಿ ಸತ್ಯ. ಹೌದು, “ಕುರುಕ್ಷೇತ್ರ’ ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಬರೀಷ್‌ ಪುತ್ರ ಅಭಿಷೇಕ್‌ ಅವರು ವೇದಿಕೆಯಲ್ಲಿ ತಮ್ಮೊಳಗಿನ ಆಸೆಯೊಂದನ್ನು ಹೊರಹಾಕಿದರು. ಆ ಆಸೆ, “ದರ್ಶನ್‌ ಜೊತೆ ತಾವೊಂದು ಸಿನಿಮಾ ಮಾಡಬೇಕು’ ಎಂಬುದೇ ಆ ಆಸೆ. ಅಭಿಷೇಕ್‌ ಮಾತಿಗೆ ಪ್ರತಿಕ್ರಿಯಿಸಿದ ಮುನಿರತ್ನ, “ಅಭಿಷೇಕ್‌ ಅವರ ಕೋರಿಕೆಯನ್ನು ಖಂಡಿತ ಈಡೇರಿಸುತ್ತೇನೆ. ಇದೇ ವರ್ಷದಲ್ಲಿ ಚಿತ್ರವೊಂದನ್ನು ಪ್ರಾರಂಭಿಸುತ್ತೇನೆ. ದರ್ಶನ್‌ ಜೊತೆ ಚರ್ಚಿಸಲಾಗಿದೆ. 
 
ಅವರು ಎಲ್ಲ ಬಗೆಯ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಒಬ್ಬ ಮೇಜರ್‌ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ ಕೂಡ. ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕನಾಗಿ ಅವರನ್ನು ನೋಡಬೇಕು ಎನಿಸುತ್ತಿದೆ. ಆ ಸೈನಿಕನ ಪಾತ್ರ ಯಾವುದು ಎಂದರೆ, ಕಳೆದ ವರ್ಷ ಪಾಕ್‌ ಉಗ್ರರ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿದ ಮೇಜರ್‌ ಅಭಿನಂದನ್‌ ಪಾತ್ರ. ದರ್ಶನ್‌ ಜೊತೆ ಅಭಿಷೇಕ್‌ ಕೂಡ ಇರುತ್ತಾರೆ’ ಎನ್ನುವ ಮೂಲಕ ನಿರ್ಮಾಪಕ ಮುನಿರತ್ನ ಹೀಗೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. 
 
ಸಂಭ್ರಮದ ವೇದಿಕೆಯಲ್ಲಿ ನಿರ್ದೇಶಕ ಮುನಿರತ್ನ ಅವರು ಈ ವಿಷಯ ಪ್ರಕಟಿಸಿದ ನಂತರ, ಮಾತಿಗಿಳಿದ ದರ್ಶನ್‌, ಮುನಿರತ್ನ ಅವರು ಪ್ರಕಟಿಸಿದ ಮೇಜರ್‌ ಅಭಿನಂದನ್‌ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂಬ ಕಲ್ಪನೆ ಎಲ್ಲರಲ್ಲೂ ಇತ್ತು. ಆದರೆ, ಆ ಚಿತ್ರದ ಬಗ್ಗೆ ದರ್ಶನ್‌ ಮಾತಾಡಲಿಲ್ಲ.

Find out more: