ಕನ್ನಡ ಚಿತ್ರರಂಗದಲ್ಲಿ ಟಗರು ಮೂಲಕ ಡಾಲಿಯಾಗಿ ಮೆರೆದಾಡಿದ ಡಾಲಿ ಧನಂಜಯ್ ತೆಲುಗಿನ ಚಿತ್ರರಂಗದಲ್ಲೂ ಬಣ್ಣ ಹಚ್ಚಲು ಸಿದ್ದರಾಗುತ್ತಿದ್ದಾರೆ. ಹಾಗಾದರೆ ತೆಲುಗಿನಲ್ಲಿ ಧನಂಜಯ್ ಯಾವ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ ಗೊತ್ತಾ..?
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ’ಭೈರವ ಗೀತಾ’ ಚಿತ್ರದ ಮೂಲಕ ನಟ ಧನಂಜಯ್ ತೆಲುಗಿಗೆ ಪಾದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ಚಿತ್ರೀಕರಿಸಿದ್ದ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅವರು ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಕಾಲಿರಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ನಟ ಧನಂಜಯ್ ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದರೂ ಅವರನ್ನು ಗುರುತಿಸುತ್ತಿರುವುದು ’ಟಗರು’ ಚಿತ್ರದ ’ಡಾಲಿ’ ಪಾತ್ರದಿಂದ. ವಿಲನ್ ಛಾಯೆಯ ಪಾತ್ರಗಳು ಧನಂಜಯ್ ಅವರನ್ನು ಹೆಚ್ಚು ಅರಸಿ ಬರುತ್ತಿವೆ. ಡಾಲಿಯ ಪಾತ್ರ ನೋಡಿಯೇ ಮೆಚ್ಚಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ’ಭೈರವ ಗೀತಾ’ ಮಾಡಿದ್ದರು. ಧನಂಜಯ್ ಅವರಿಗೆ ಈಗ ತೆಲುಗು ಚಿತ್ರರಂಗದಿಂದ ಮಹತ್ವದ ಪಾತ್ರ ಬಂದಿದೆ.
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಚಿತ್ರ ’ಪುಷ್ಪ’ದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಧನಂಜಯ್ ಅವರಿಗೆ ಆಹ್ವಾನ ಬಂದಿದೆ ಎನ್ನಲಾಗಿದೆ. ಈ ಮೂಲಕ ಧನಂಜಯ್ ತೆಲುಗಿನಲ್ಲಿ ಎರಡನೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈ ಪಾತ್ರಕ್ಕೆ ಬಾಬ್ಬಿ ಸಿಂಹ ಮತ್ತು ರಾಜ್ ದೀಪಕ್ ಶೆಟ್ಟಿ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಈ ಆಕ್ಷನ್ ಎಂಟರ್ಟೈನರ್ ಚಿತ್ರದ ನಿರ್ಣಾಯಕ ಪಾತ್ರಕ್ಕೆ ಧನಂಜಯ್ ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆ. ’ಡಾಲಿ’ ಈ ಪಾತ್ರದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
’ಪುಷ್ಪ’ ಚಿತ್ರದಲ್ಲಿ ಬಹಳ ಮುಖ್ಯವಾದ ಸನ್ನಿವೇಶದಲ್ಲಿ ಬರುವ ಪಾತ್ರದಲ್ಲಿ ಧನಂಜಯ್ ನಟಿಸಲಿದ್ದಾರೆ. ಲಾಕ್ಡೌನ್ ಅವಧಿಯೆಲ್ಲ ಮುಗಿದ ಬಳಿಕ ಅವರು ಚಿತ್ರಕ್ಕೆ ಸಹಿ ಹಾಕಲಿದ್ದಾರೆ. ಅಲ್ಲು ಅರ್ಜುನ್ ಜತೆ ನಟಿಸಲು ಧನಂಜಯ್ ಕೂಡ ಎಕ್ಸೈಟ್ ಆಗಿದ್ದಾರೆ’ ಎಂಬುದಾಗಿ ಚಿತ್ರತಂಡದ ಸದಸ್ಯರೊಬ್ಬರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಅಲ್ಲು ಅರ್ಜುನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ, ಕರಾವಳಿಯ ಸುನೀಲ್ ಶೆಟ್ಟಿ ಖಳನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಧನಂಜಯ್ ಎಂಟ್ರಿ ಕೊಟ್ಟರೆ ಕನ್ನಡದ ಮೂವರು ಈ ಚಿತ್ರದಲ್ಲಿ ನಟಿಸಿದಂತೆ ಆಗುತ್ತದೆ.
ತಿರುಮಲದ ಬೆಟ್ಟ ಪ್ರದೇಶ ಶೇಷಾಚಲಂ ಅರಣ್ಯ ಭಾಗದ ಹಿನ್ನೆಲೆಯಲ್ಲಿ ಇಡೀ ಚಿತ್ರ ನಡೆಯಲಿದೆ. ಕಳ್ಳಸಾಗಾಣಿಕೆಗೆ ಸಂಬಂಧಿಸಿದ ಚಿತ್ರ. ತೆಲುಗು, ಹಿಂದಿ, ತಮಿಳು, ಮಲಯಾಳಂ ಜತೆಗೆ ಕನ್ನಡದಲ್ಲಿಯೂ ಈ ಚಿತ್ರ ಸಿದ್ಧವಾಗಲಿದೆ. ಈ ಮೂಲಕ ಅಲ್ಲು ಅರ್ಜುನ್ ಕನ್ನಡಕ್ಕೂ ಪಾದಾರ್ಪಣೆ ಮಾಡಿದಂತೆ ಆಗಲಿದೆ.