ಇತ್ತೀಚೆಗೆ ಕೊರೋನಾ ವೈರಸ್ ಇಮದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ದೇಶದ ಎಲ್ಲಾ ಚಿತ್ರ ಮಂದಿರಗಳು ಸ್ತಬ್ದಗೊಂಡಿರುವುದರಿಂದ ಯಾವ ಚಿತ್ರಗಳೂ ಕೂಡ ಬಿಡುಗಡೆಯಾಗದೆ ಉಳಿದಿದೆ. ಹೀಗಿರುವಾಗ ಈ ಸಂದರ್ಭದಲ್ಲಿ ವೇಬ್ ಸೀರಿಸ್‌ಗಳು ತಯಾರಾಗಿ ಬಿಡುಗಡೆಯಾಗುತ್ತಿದೆ. ಇಂತಹ ಪ್ರಯತ್ನಗಳು ಎಲ್ಲಾ ಭಾಷೆಗಳಲ್ಲೂ ನಡೆಯುತ್ತಿದ್ದು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಇಂತಹದ್ದೇ ಬಾಲಿವುಡ್‌ನ ವೆಬ್ ಸೀರಿಸ್ ನಲ್ಲಿ ಕನ್ನಡದ ಖ್ಯಾತ ಕಲಾವಿದನೊಬ್ಬ ಅಭಿನಯಿಸುತ್ತಿದ್ದಾರೆ. ಅಷ್ಟಕ್ಕೂ ಕನ್ನಡದ ನಟ ಯಾರು ಗೊತ್ತಾ..?
ಜಬ್ ವಿ ಮೆಟ್ ಖ್ಯಾತಿಯ ಇಮ್ತಿಯಾಜ್ ಅಲಿ, ಭಿನ್ನ ಕಥೆಗಳನ್ನು ಬಾಲಿವುಡ್ಗೆ ಪರಿಚಯಿಸಿದ ನಿರ್ದೇಶಕ. ಕಳೆದ ಫೆಬ್ರವರಿಯಲ್ಲಿ ಪ್ರೇಮಕಥೆಯೊಂದನ್ನು ತೆರೆಗೆ ತಂದ ಅಲಿ, ಲಾಕ್ಡೌನ್ ಇಡೀ ಬಾಲಿವುಡ್‌ಅನ್ನು ಕಟ್ಟಿ ಹಾಕುವುದರೊಳಗೆ ಏಳು ಕಂತುಗಳ ವೆಬ್ ಸರಣಿಯೊಂದನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ಕನ್ನಡ ಜನಪ್ರಿಯ ನಟ ಕಿಶೋರ್ ನಟಿಸಿದ್ದಾರೆ. ‘ಶೀ’ ಹೆಸರಿನ ಈ ಸರಣಿ ಸಾಮಾನ್ಯ ಪೇದೆಯೊಬ್ಬಳ ಸುತ್ತ ಹೆಣೆದ ಕತೆ. ಪೊಲೀಸ್ ಇಲಾಖೆಯ ತನಿಖಾ ದಳದಲ್ಲಿ ಉಗ್ರನೊಬ್ಬನನ್ನು ಬಲೆಗೆ ಬೀಳಿಸಲು ಹೆಣೆಯುವ ಬಲೆಯಲ್ಲಿ ಪೇದೆ ಒಂದುಮುಖ್ಯ ದಾಳ. ಹಾಗೆ ಬಲೆ ಬೀಳಬೇಕಾಗಿರುವ ಉಗ್ರನ ಹೆಸರು ‘ನಾಯಕ್’. ಈ ನಾಯಕ್ ಪಾತ್ರದಲ್ಲಿಯೇ ಕನ್ನಡದ ಜನಪ್ರಿಯ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ. ಸರಣಿಯ ಆರಂಭದ ಕಂತುಗಳಿಂದಲೂ ನಾಯಕ್ ಹೆಸರು ಕೇಳಿಬರುತ್ತದೆಯಾದರೂ ಕಾಣಿಸಿಕೊಳ್ಳುವುದು ಕಡೆಯ ಎರಡು ಕಂತುಗಳಲ್ಲಿ. ಮುಂಬೈ ನಗರದಲ್ಲಿ ದಾಳಿ ನಡೆಸಲು ಸಂಚು ರೂಪಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಜಮೀನ್ದಾರಿ ವಂಶದ ಹಿನ್ನೆಲೆಯ ನಾಯಕ್ ಅಲಿಯಾಸ್ ನಾಯಕಡು, ಪ್ರೀತಿಗೆ ಹಾತೊರೆಯುವ, ಹೆಚ್ಚು ಯಾರೊಂದಿಗೂ ಮಾತನಾಡದ, ಹೆಣ್ಣಿನೊಂದಿಗೆ ಸಭ್ಯವಾಗಿ ವ್ಯವಹರಿಸುವ ವ್ಯಕ್ತಿ. ಈತನಿಂದ ಮಾಹಿತಿ ಕಲೆಹಾಕಲು ಬರುವ ಪೇದೆ, ಕಡೆಗೆ ಆತನೊಂದಿಗೆ ಸ್ನೇಹ ಬೆಸೆದುಕೊಳ್ಳುವ ಮೂಲಕ ಸರಣಿ ಕೊನೆಯಾಗುತ್ತದೆ. ಇನ್ನೊಂದು ಸೀಸನ್ ಸುಳಿವು ನೀಡಿರುವ ಈ ಸರಣಿಯಲ್ಲಿ ಕಿಶೋರ್ ಕಾಣಿಸಿಕೊಂಡಿರುವ ರೀತಿಯೇ ವಿಶೇಷ. ಯಾವುದೇ ಅಬ್ಬರವಿಲ್ಲದ, ಆಕ್ಷನ್ಗಳಿಲ್ಲದ ತಣ್ಣನೆಯ ವ್ಯಕ್ತಿಯಾಗಿ ನಟಿಸಿದ್ದಾರೆ. ಹೆಚ್ಚು ಡೈಲಾಗ್ಗಳಿಲ್ಲದ ಪಾತ್ರ. ನೋಟದಲ್ಲೇ ಭಾವಗಳನ್ನು ಅಭಿವ್ಯಕ್ತಿಸುವ ಪಾತ್ರ. ಹಾಗೆ ನೋಡಿದರೆ ‘ಶೀ’ ಅಲಿಯವರ ಸಮರ್ಥ ಪ್ರಯೋಗವೇನಲ್ಲ. ಆದರೆ ಪೇದೆ ಪಾತ್ರದಲ್ಲಿ ಕಾಣಿಸಿಕೊಂಡ ಅದಿತಿ ಪೋಹನ್ಕರ್, ಸಸ್ಯ ಆಗಿ ಕಾಣಿಸಿಕೊಂಡ ವಿಜಯ್ ಶರ್ಮಾ ಮತ್ತು ಕಿಶೋರ್ ಆಕರ್ಷಿಸುತ್ತಾರೆ.
ವಿಭಿನ್ನ ಪಾತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಕಿಶೋರ್ ದಕ್ಷಿಣ ಭಾರತದ ಬಹುಬೇಡಿಕೆಯ ನಟ. ನಟರಾಗಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಲೇ ಬಂದಿರುವ ಇವರು, ಹೊಸ ವೀಕ್ಷಕ ವರ್ಗವನ್ನು ಸೆಳೆಯುತ್ತಿದ್ದಾರೆ. ಈ ಹಿಂದೆ ಎರಡು ವೆಬ್ಸರಣಿಯಲ್ಲಿ ಕಿಶೋರ್ ನಟಿಸಿ ಗಮನಸೆಳೆದಿದ್ದರು. ಝೀ೫ ನೆಟ್ವರ್ಕ್ ನಿರ್ಮಿಸಿದ ಪುಷ್ಪಾ ಇಗ್ನೇಶಿಯಸ್ ನಿರ್ದೇಶನದ ‘ಹೈ ಪ್ರೀಸ್ಟ್’ ಮತ್ತು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ರಾಜ್ ನಿಡಿಮೋರು ಮತ್ತು ಕೃಷ್ಣ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ನಲ್ಲಿ ತನಿಖಾಧಿಕಾರಿಯಾಗಿ ನಟಿಸಿದ್ದರು.