ಕರೊನಾ ವಿರುದ್ಧದ ಹೋರಾಟದಲ್ಲಿ ಹಲವು ವಿಶಿಷ್ಟ ಪ್ರಯತ್ನಗಳನ್ನು ನಡೆಸಿರುವ ಕರ್ನಾಟಕ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕರೊನಾ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಚಿತ್ರರಂಗ ಹಾಗು ಕ್ರೀಡಾ ರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯರೂಪಕ 'ಬದಲಾಗು ನೀನು, ಬದಲಾಯಿಸು ನೀನು' #MYHEROವನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು.

 

ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಹಲವು ಪ್ರಯತ್ನಗಳು, ಕರೊನಾ ಶುರುವಾದಾಗಿನಿಂದ ನಡೆಯುತ್ತಲೇ ಇವೆ. ಬಗೆಬಗೆ ಹಾಡುಗಳು ಒಂದಷ್ಟು ಬಿಡುಗಡೆ ಆದರೆ, ಕಿರುಚಿತ್ರಗಳೂ ಜಾಗೃತಿ ಮೂಡಿಸಿವೆ. ಆದರೆ, ಕನ್ನಡದ ಮಟ್ಟಿಗೆ ಇಡೀ ಸ್ಯಾಂಡಲ್​ವುಡ್​ ಅನ್ನು ಒಟ್ಟಾಗಿ ಸೇರಿಸಿ ಯಾರೂ ಒಂದೇ ಒಂದು ಹಾಡನ್ನು ಇದೂವರೆಗೂ ಮಾಡಿರಲಿಲ್ಲ. ಇದೀಗ ಅದು 'ಬದಲಾಗು ನೀನು..' ಮೂಲಕ ಸಾಕಾರವಾಗಿದೆ. ಚಂದನವನದ ಬಹುತೇಕ ಎಲ್ಲ ತಾರೆಯರು, ಮಾಜಿ ಕ್ರೀಡಾಪಟುಗಳು ಕರೊನಾ ವಿರುದ್ಧದ ಹೋರಾಟಕ್ಕೆ ಹಾಡಿನ ಮೂಲಕ ಕೈ ಜೋಡಿಸಿದ್ದಾರೆ. 'ಒಂದಾನೊಂದು ಕಾಲ.. ನಗುವೇ ಬದುಕ ಮೂಲ.. ಮರೆತುಹೋಯಿತು ನಿನ್ನಿಂದ.. ನೀ ಯಾರೋ..' ಎಂಬ ಸಾಹಿತ್ಯದಿಂದ ಶುರುವಾಗುವ ಹಾಡು, ಕರೊನಾದಿಂದ ಏನೆಲ್ಲ ಘಟಿಸಿಹೋಯಿತು? ಕರೊನಾ ವಾರಿಯರ್ಸ್​ ಶ್ರಮ ಎಂಥದ್ದು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪವನ್​ ಒಡೆಯರ್​. ಈ ಹಾಡು ಶುಕ್ರವಾರ ಡಿ ಬೀಟ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಆಗಿದೆ.

 

ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ದೃಶ್ಯರೂಪಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುಧಾಕರ್ , ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ವಿನೂತನ ಪ್ರಯತ್ನವಾಗಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಬದಲಾಗು ನೀನು, ಬದಲಾಯಿಸು ನೀನು' ಎಂಬ ಸುಂದರ ದೃಶ್ಯರೂಪಕವೊಂದನ್ನು ರೂಪಿಸಿದ್ದೇವೆ.

 

ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾ ತಾರೆಯರು ದನಿಯಾಗಿರುವ ಈ ದೃಶ್ಯರೂಪಕದ ಪರಿಕಲ್ಪನೆ ನಾನು ಸ್ವಯಂ-ಕ್ವಾರಂಟೈನ್'ಗೆ ಒಳಗಾಗಿದ್ದಾಗ ನನ್ನಲ್ಲಿ ಮೂಡಿತ್ತು. ಇಡೀ ವಿಶ್ವವೇ ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ರಾಜ್ಯದ ಜನರ ಸೇವೆ ಮಾಡುವ ಸದವಕಾಶ ನನಗೆ ಒದಗಿ ಬಂದಿತು. ಸರ್ಕಾರ ತೆಗೆದುಕೊಳ್ಳುತ್ತಿರುವ ಅಪಾರ ಮುಂಜಾಗ್ರತಾ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಕೆಲಸ ಪ್ರಮುಖವಾಗಿ ಆಗಬೇಕಿದೆ ಎಂಬ ಯೋಚನೆ ನನಗೆ ಬಂದಿತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ.

ಈ ಕಾರ್ಯಕ್ಕಾಗಿ ಚಲನಚಿತ್ರ ಹಾಗೂ ಕ್ರೀಡಾ ರಂಗದ ಖ್ಯಾತನಾಮರನ್ನು ಸಂಪರ್ಕಿಸಿದಾಗ ಅವರೆಲ್ಲಾ ಕೂಡಲೆ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕರೋನ ಕುರಿತಾಗಿ ಹಲವು ಉಪಯುಕ್ತ ಸಲಹೆಗಳನ್ನು ಕೂಡ ನೀಡಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

 

 

Find out more: