ಕೊರೋನಾ ವೈರಸ್ ಆನ್ನು ತಡೆಯುವ ಉದ್ದೇಶದಿಂದ ಲಾಕ್ ಡೌನ್ ಮಾಡಲಾದ ಸಂದರ್ಭದಲ್ಲಿ ಇಡೀ ದೇಶದ ಉದ್ಯಮಗಳೆಲ್ಲವೂ ಕೂಡ ಸ್ಥಬ್ದವಾಗಿದ್ದವು ಅದರಂತೆ ಭಾರತೀಯ ಎಲ್ಲಾ ಚಿತ್ರ ಉದ್ದಿಮೆಗಳು ಕೂಡ ಸ್ಥಬ್ದವಾಗಿದ್ದವು. ಇದರಿಂದಾಗಿ ಅದೆಷ್ಟೋ ಚಿತ್ರಗಳ ಚಿತ್ರೀಕರಣಗಳು ಅರ್ಧಕ್ಕೆ ನಿಂತಿದ್ದವು. ಕರ್ನಾಟಕದಲ್ಲೂ ಕೂಡ ಚೀತ್ರೀಕರಣಕ್ಕೆ ಅವಕಾಶವನ್ನು ನೀಡಿರಲಿಲ್ಲ. ಆದರೆ ಬೇರೆ ರಾಜ್ಯಗಳು ಚಿತ್ರೀಕರಣಕ್ಕೆ ಅವಕಾಶಕೊಟ್ಟ ನಂತರ ಪ್ಯಾಂಟಮ್ ಚಿತ್ರತಂಡ ಹೈದ್ರಾಬಾದ್ ಗೆ ಹೋಗಿ ಚಿತ್ರೀಕರಣವನ್ನು ಆರಂಭಿಸಿದ್ದರು. ಅದರಂತೆ ಚಂದನವನದ ಬಹು ನಿರೀಕ್ಷಿತ ಚಿತ್ರಗಾದ ಈ ಎರಡು ಚಿತ್ರಗಳು ಸೆಟ್ ನಿರ್ಮಿಸಿ ಚಿತ್ರೀಕರಣವನ್ನು ಮಾಡಲು ಮುಂದಾಗಿದೆ.
ಲಾಕ್ಡೌನ್ನಿಂದ ಸ್ಥಗಿತವಾಗಿದ್ದ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಶುರುವಾಗಿದೆ. ಆದರೆ, ದೊಡ್ಡ ದೊಡ್ಡ ಸಿನಿಗಳ ಶೂಟಿಂಗ್ಗೆ ಇನ್ನು ಮೀನಾಮೇಷ ಎಣಿಸಲಾಗ್ತಿತ್ತು. ಕಾರಣ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರೋದು. ಸದ್ಯದಲ್ಲೇ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಶುರುವಾಗುವ ನಿರೀಕ್ಷೆ ಮೂಡಿದೆ. ದೊಡ್ಡ ದೊಡ್ಡ ಸಿನಿಮಾಗಳ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ.
ಕೊರೊನಾ ಸಮಸ್ಯೆ ಬಗೆಹರಿಯುವವರೆಗೂ ಶೂಟಿಂಗ್ ನಡೆಸೋದು ಬೇಡ ಅಂದುಕೊಂಡಿದ್ದವರು ಈಗ ಸೆಟ್ಗೆ ಇಳಿದಿದ್ದಾರೆ. ಹೈದಾರಾಬಾದ್ನಲ್ಲಿ ಕಳೆದ 20 ದಿನಗಳಿಂದ ಫ್ಯಾಂಟಮ್ ಸಿನಿಮಾ ಶೂಟಿಂಗ್ ನಡೀತಿದೆ. ಕೊರೊನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡು ಶೂಟಿಂಗ್ ನಡೆಸಲಾಗ್ತಿದೆ. ಇದೀಗ ಕೆಜಿಎಫ್ ಚಾಪ್ಟರ್-2 ಮತ್ತು ಮದಗಜ ಸಿನಿಮಾಗಳ ಶೂಟಿಂಗ್ ಸಿದ್ಧತೆ ಶುರುವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಒಂದು ಫೈಟ್ ಮತ್ತು ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಮಿನರ್ವ ಮಿಲ್ನಲ್ಲಿ ಚಿತ್ರಕ್ಕಾಗಿ ಸೆಟ್ ಹಾಕುವ ಕೆಲಸ ಶುರುವಾಗಿದ್ದು, ಈ ತಿಂಗಳಾಂತ್ಯಕ್ಕೆ ಶೂಟಿಂಗ್ ಶುರುವಾಗಲಿದೆ. ಈ ಶೆಡ್ಯೂಲ್ನಲ್ಲಿ ಅಧೀರ ಸಂಜಯ್ ದತ್ ಕೂಡ ತಂಡವನ್ನ ಸೇರಿಕೊಳ್ಳಲಿದ್ದಾರೆ.
ಕೆಜಿಎಫ್-2 ಜೊತೆಗೆ ಮತ್ತೊಂದು ಬಹುನಿರೀಕ್ಷಿತ ಮದಗಜ ಸಿನಿಮಾ ಶೂಟಿಂಗ್ಗೂ ಇದೇ ತಿಂಗಳು ಚಾಲನೆ ಸಿಗಲಿದೆ. ಅಯೋಗ್ಯ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಕುಮಾರ್ ಮದಗಜ ಚಿತ್ರದ ಸಾರಥ್ಯ ವಹಿಸಿದ್ದಾರೆ. ಶ್ರೀಮುರಳಿ ಮದಗಜವಾಗಿ ಘೀಳಿಡಲು ಬರ್ತಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಪ್ರಶಾಂತ್ ನೀಲ್ ಮದಗಜ ಚಿತ್ರದ ಸ್ಕ್ರಿಪ್ಟ್ ಅನ್ನ ತಿದ್ದಿ ತೀಡಿರೋದು ಮತ್ತೊಂದು ವಿಶೇಷ. ವಾರಣಾಸಿಯಲ್ಲಿ ಫಸ್ಟ್ ಶೆಡ್ಯೂಲ್ ಮುಗಿಸಿ ಬಂದಿರೋ ಮದಗಜ, ಇದೇ ತಿಂಗಳು ಮತ್ತೆ ಶೂಟಿಂಗ್ ಸೆಟ್ಗೆ ಮರಳಲಿದೆ.
ಕೆಜಿಎಫ್ ಮತ್ತು ಮದಗಜ ಸಿನಿಮಾ ಶೂಟಿಂಗ್ ಶುರುವಾದ್ರೆ, ನಿಧಾನವಾಗಿ ಬೇರೆ ಸಿನಿಮಾಗಳ ಶೂಟಿಂಗ್ ಶುರುವಾಗಲಿದೆ. ಈಗಾಗಲೇ ಸಿನಿಮಾ ಪ್ರದರ್ಶನ ಮತ್ತು ಚಿತ್ರೀಕರಣ ಬಂದ್ ಆಗಿ ನೂರಾರು ಕೋಟಿ ನಷ್ಟವಾಗಿದೆ. ಚಿತ್ರರಂಗ ಮತ್ತೆ ಫೀನಿಕ್ಸ್ನಂತೆ ಎದ್ದು ಬರಲು ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಟ ಶುರು ಮಾಡಬೇಕಿದೆ.