ಹೌದು, ಮುಂಬರುವ ಜೂನ್ ತಿಂಗಳ ಕೊನೆಯ ವಾರದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡತಿಳಿಸಿದ್ದಾರೆ. ರಾಜ್ಯಾದ್ಯಂತ ವಿಮಾನ ಬಳಸಿ ಈ ಕಾರ್ಯ ನಡೆಸಲಾಗುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಮೋಡ ಬಿತ್ತನೆಗೆ ಒಟ್ಟಾರೆ 88 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯನ್ನು ಒಂದು ಕೇಂದ್ರವನ್ನಾಗಿ ಮಾಡಿ, ಜೊತೆಗೆ ಬೆಂಗಳೂರನ್ನು ಮತ್ತೊಂದು ಕೇಂದ್ರವನ್ನಾಗಗಿ ಮಾಡಿ, ಹೀಗೆ ರಾಜ್ಯದಲ್ಲಿ ಎರಡು ಮೋಡ ಬಿತ್ತನೆ ಕೇಂದ್ರಗಳನ್ನು ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಕಣ್ಮುಚ್ಚಿ ಮಲಗಿಲ್ಲ: ದೇಶಪಾಂಡೆ
ಬರವಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ ಅನ್ನೋ ಕೂಗು ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ರಾಜ್ಯದಲ್ಲಿ ಬರ ಪರಿಹಾರ ಕೈಗೊಳ್ಳದೇ ಸರ್ಕಾರ ಕಣ್ಮುಚ್ಚಿ ಮಲಗಿಲ್ಲ ಎಂದು ಖಾರವಾಗಿ ಮಾತನಾಡಿದ್ದಾರೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದಅವರು, ಬರ ಪರಿಹಾರ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರ ಜನರ ಸಮಸ್ಯೆ ಕಡೆಗೆ ಗಮನ ಹರಿಸಿ, ಬರಗಾಲದ ಛಾಯೆಯನ್ನು ಅಳಿಸಬೇಕಿದೆ.