ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆರಂಭ ಆದಾಗಿನಿಂದಲೂ ಒಂದಿಲ್ಕೊಂದು ಚರ್ಚೆಗಳು ನಡೆಯುತ್ತಲೇ ಇವೆ. ಅದರಲ್ಲೂ ಸಿಎಂ ವಿಚಾರವಾಗಿ ಇನ್ನೂ ಮಹತ್ವದ ಚರ್ಚೆಗಳು ನಡೆಯುತ್ತಿವೆ.
ಈ ಹಿಂದೆ ಆರಂಭವಾಗಿದ್ದ 'ಸಿದ್ದು ಸಿಎಂ' ಎಂಬ ವಿವಾದ ಅಂತ್ಯವಾಗುತ್ತಲೇ, ಮತ್ತೊಂದು ಚರ್ಚೆ ಆರಂಭ ಆಗಿತ್ತು ಅದು ಮುಖ್ಯಮಂತ್ರಿ ಕುಮಾರಸ್ವಾಮಿ ಮುನ್ನೆಲೆಗೆ ತಂದಿದ್ದ 'ಖರ್ಗೆ ಸಿಎಂ' ಅನ್ನೋ ವಿವಾದ.
ಈ ವಿವಾದಕ್ಕೆ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹೌದು ಸಿದ್ದರಾಮಯ್ಯ ಅವರು 'ರೇವಣ್ಣ ಸಿಎಂ' ಅನ್ನೋ ಪ್ರತಿವಾದ ಮುಂದಿಟ್ಟಿದ್ದಾರೆ. ಈ ಮೂಲಕ ಜೆಡಿಎಸ್ ಗೆ ಮುಜುಗರ ತರೋಕೆ ಮುಂದಾಗಿದ್ದಾರೆ.
ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ, ರೇವಣ್ಣ ಅವರೂ ಮುಖ್ಯಮಂತ್ರಿಯಾಗಲು ಅರ್ಹರು ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ಜೆಡಿಎಸ್‌ಗೆ ತಿರುಗೇಟು ನೀಡಿದ್ದಾರೆ.
ಸಿದ್ದು ಹೇಳಿದ್ದೇನು?
'ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ರೇವಣ್ಣ ಕೂಡ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.