ಸುಮಲತಾ ಅಂಬರೀಶ್ ಅವರೀಗ ಅಚ್ಚರಿ ನಿರ್ಧಾರವನ್ನು ಕೈಗೊಂಡಿದ್ದಾರೆ. ಹೌದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಬಂದಿರೋ ಸುಮಲತಾ ಅವರು ಇದೀಗ ಪಕ್ಷೇತರರಾಗಿಯೇ ಮುಂದುವರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿರಲಿಲ್ಲ. ಮೈತ್ರಿ ಸರ್ಕಾರದ ಸೂತ್ರದ ಪ್ರಕಾರ ಮಂಡ್ಯ ಕ್ಷೇತ್ರ ಜೆಡಿಸ್ ಪಾಲಾಗಿತ್ತು. ಹೀಗಾಗಿ ಸುಮಲತಾ ಅವರು ಪಕ್ಷೇತರರಾಗಿ ನಿಲ್ಲೋಕೆ ಮುಂದಾಗಿದ್ದರು.
ಸುಮಲತಾ ಪಕ್ಷೇತರರಾಗಿ ಚುನಾವಣೆಗೆ ನಿಂತಾಗ ಬಿಜೆಪಿ ಅವರಿಗೆ ಬೆಂಬಲ ನೀಡಿತ್ತು. ಸ್ಚತಃ ಪ್ರಧಾನಿ ನರೇಂದ್ರ ಮೋದಿಯೇ ಸುಮಲತಾ ಬಗ್ಗೆ ಮಾತನಾಡಿದ್ದರು. ಹೀಗಾಗಿ ಸದ್ಯ ಎನ್.ಡಿ.ಎ ಅಧಿಕಾರದಲ್ಲಿ ಇದೆ. ಹೀಗಾಗಿ ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಅದನ್ನು ಸುಮಲತಾ ಹುಸಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರೂ ಸಹ ಸುಮಲತಾ ಅವರಿಗೆ ಸಹಾಯ ಮಾಡಿದ್ದರು. ಇದರ ಜೊತೆಗೆ ತಮ್ಮ ಪತಿ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದ ಕಾರಣ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು.
ಇದೀಗ ಎರಡಕ್ಕೂ ಸುಮಲತಾ ನೋ ಎಂದಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಪಕ್ಷೇತರಳಾಗಿ ಮುಂದುವರೆಯುತ್ತೇನೆ. ಆದರೆ ವಿಷಯ ಅಧಾರಿತವಾಗಿ ಕೇಂದ್ರ ಬೆಂಬಲ ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.