ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ಬಂದ ಬಳಿಕ ದಂಡ ಮೊತ್ತದ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಕಡಿಮೆ ಮಾಡಲು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಹೌದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸೆಪ್ಟೆಂಬರ್ 1 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. 


ಆದರೆ ಈ ತಿದ್ದುಪಡಿ ಜಾರಿಗೆ ಬರುತ್ತಿದ್ದಂತೆಯೇ ದೇಶದಾದ್ಯಂತ ಹಲವು ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ನೋಡಿದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹವಾಗಿದೆ. ಆದರೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಈ ದರವನ್ನು ಕಡಿತ ಮಾಡಲಾಗಿದೆ.


ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇನ್ನಿತರೇ ವೇದಿಕೆಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ದರವನ್ನು ಕಡಿತ ಮಾಡೋ ಮೂಲಕ ಕರ್ನಾಟಕ ಸರ್ಕಾರವೂ ಈ ಕುರಿತು ಗಂಭೀರವಾದ ಚಿಂತನೆ ನಡೆಸಿತ್ತು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ದಂಡ ಮೊತ್ತ ಕಡಿಮೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದರು.


ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜ್ಯದಲ್ಲಿ ದಂಡ ಮೊತ್ತ ಕಡಿಮೆ ಮಾಡುವುದಾಗಿ ನಿನ್ನೆಯಷ್ಡೇ ಘೋಷಣೆ ಮಾಡಿದ್ದರು. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದರಂತೆಯೇ ಬೇರೆ ರಾಜ್ಯದಲ್ಲಿಯೂ ಸಹ ಇದನ್ನು ಜಾರಿಗೆ ತರಬೇಕು ಎಂದು ಕೂಗು ಕೇಳಿ ಬರುತ್ತಿದೆ. ಹೀಗಾಗಿ ಕರ್ನಾದಲ್ಲಿಯೂ ಈ ದಂಡದ ಮೊತ್ತವನ್ನು ಕಡಿಮೆ ಮಾಡುವತ್ತ ಚಿತ್ತ ಹರಿಸಿದೆ ಎನ್ನಲಾಗುತ್ತಿದೆ. ಅಲ್ಲದೇ ಗೃಹ ಸಚಿವ ಬೊಮ್ಮಾಯಿ ಅವರು ಸಾರಿಗೆ ಇಲಾಖೆಗೆ ಈ ಕುರಿತು ಮನವಿ ಮಾಡಿದ್ದಾರೆ.


ಹೀಗಾಗಿ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಇನ್ನೇನು ಸಭೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಎಷ್ಟು ದಂಡವನ್ನು ಕಡಿಮೆ ಮಾಡಬೇಕು? ಎಂದು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ. ಇನ್ನು ಗುಜರಾತ್ ನಲ್ಲಿ ಹೆಲ್ಮೆಟ್ ರಹಿತ ಪ್ರಯಾಣಕ್ಕೆ 2000 ದಿಂದ 500ಕ್ಕೆ ಇಳಿಸಲಾಗಿದೆ. ಹೀಗೆ ಬೇರೆ ಬೇರೆ ದಂಢದ ಶುಲ್ಕವನ್ನು ಇಳಿಸಲಾಗಿದೆ.


Find out more: