ಬೆಳಗಾವಿ ಸಾಹುಕಾರ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಪ್ತ ಎಂದೇ ಗುರುತಿಸಿಕೊಂಡಿದ್ದವರು ಮಾಜಿ ಶಾಸಕ ಮಹೇಶ್ ಕುಮಟಳ್ಳಿ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಅಥಣಿ ಕ್ಷೇತ್ರದಿಂದ ಗೆದ್ದಿದ್ದ ಮಹೇಶ್ ಕುಮಟಳ್ಳಿ ಪಕ್ಷಕ್ಕಿಂತಲೂ ತಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರೆಡೆಗಿನ ನಿಷ್ಠೆಯಿಂದಲೇ ರಾಜೀನಾಮೆ ನೀಡಿ ಕೊನೆಗೂ ಸಮ್ಮಿಶ್ರ ಸರ್ಕಾರ ಕೆಡವಲು ಸಹಕರಿಸಿದರು. ಕಳೆದ ನಾಲ್ಕು ದಿನಗಳ ಹಿಂದೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಹದಿನೈದು ಕ್ಷೇತ್ರಗಳಲ್ಲಿ ಒಂದಾದ ಅಥಣಿಯಲ್ಲೂ ಸ್ಪರ್ಧೆಗೆ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದು ಅಥಣಿ ಕ್ಷೇತ್ರ. ಈ ಕ್ಷೇತ್ರದ ಜನರಿಗೆ ಕೃಷಿಯೇ ಆದಾರ. ಜೊತೆಗೆ ಕೈಗಾರಿಕೆಗೂ ಇಲ್ಲಿ ಹೆಚ್ಚಿನ ಅವಕಾಶ ಲಭಿಸಿದೆ. ಇಲ್ಲಿನ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಸಕ್ಕರೆ ಕಾರ್ಖನೆಗಳಿದ್ದು, ಇವುಗಳಲ್ಲಿ 5 ಕಾರ್ಖನೆಗಳು ಅಥಣಿಯಲ್ಲಿವೆ. ಇದು ಈ ಕ್ಷೇತ್ರದ ಅಭಿವೃದ್ಧಿಯ ಸೂಚಕವೂ ಎನ್ನಬಹುದು. ಅಷ್ಟೇ ಅಲ್ಲ, ಶೈಕ್ಷಣಿಕವಾಗಿಯೂ ಅಥಣಿ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ.
ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ದಿಸಲಿದೆಯಂತೆ. 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಲಕ್ಷ್ಮಣ ಸವದಿ ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿ ಸೇರಿ ಅಲ್ಲಿಂದ ಸತತ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸಂಗಪ್ಪ ಸವದಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಹೇಶ್ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದರು. ಆದರೂ ಅವರಿಗೆ ಅದೃಷ್ಟ ಬಲದಿಂದ ಡಿಸಿಎಂ ಪಟ್ಟ ಒಲಿದಿತ್ತು. ಆದರೆ ಇತ್ತ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹರಾಗಿದ್ದಾರೆ.
ಮಹೇಶ ಕುಮಟಳ್ಳಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾರದೇ ಹಠಾತ್ ನಿರ್ಧಾರ ತೆಗೆದುಕೊಂಡಿದ್ದರು ಅವರ ಗುರುವಿಗಾಗಿ. ಮಹೇಶ್ ಕುಮಟಳ್ಳಿ ಅನರ್ಹರಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮಹೇಶ್ ಗೆ ಟಿಕೇಟ್ ನೀಡಿದರೆ ನನ್ನ ಪರಿಸ್ಥಿತಿ ಏನು ಎಂದು ಲಕ್ಷ್ಮಣ್ ಚಿಂತನೆ ನಡೆಸಿದ್ದಾರೆ.