ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯ ರಾಜಕೀಯ ದಲ್ಲಿ ಭಾರೀ ಸಂಚಲನ ಮೂಡಿಸಿರುವ ಘಟನೆಯೊಂದು ನಡೆದಿದೆ. ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್ ನಡುವಿನ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಪಕ್ಷದ ಮೇಲಿನ ಯಡಿಯೂರಪ್ಪ ಅವರ ಹಿಡಿತವನ್ನು ತಪ್ಪಿಸಲು ನಳಿನ್ ಸದ್ದಿಲ್ಲದೆ ಕಸರತ್ತು ಮಾಡುತ್ತಿದ್ದಾರೆಯೇ? ಎಂಬ ಅನುಮಾನ  ಸಹ ಇದೀಗ ಮೂಡಿದೆ.


ಮಾಜಿ ವಿಧಾನ ಪರಿಷತ್​ ಸದಸ್ಯ ಶಿವಮೊಗ್ಗ ಮೂಲದ ಭಾನುಪ್ರಕಾಶ್ ಹಾಗೂ ನಿರ್ಮಲ್​ ಕುಮಾರ್ ಸುರಾನ ಬಿಎಸ್​ವೈ ಕಡು ವಿರೋಧಿಗಳು. ಈ ಹಿಂದೆ ಬಿಎಸ್​ವೈ ಬಿಜೆಪಿ ಪಕ್ಷವನ್ನು ತ್ಯಜಿಸಿ ಕೆಜೆಪಿ ಕಟ್ಟಿದಾಗ ಈ ಇಬ್ಬರೂ ನಾಯಕರು ಬಿಎಸ್​ವೈ ಅವರನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದರು. ಪರಿಣಾಮ ಬಿಎಸ್​ವೈ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿ ಪಕ್ಷದ ಅಧ್ಯಕ್ಷ ಗಾದಿಗೆ ಏರಿದ ನಂತರ ಈ ಇಬ್ಬರೂ ನಾಯಕರನ್ನು ಮೂಲೆ ಗುಂಪು ಮಾಡಲಾಗಿತ್ತು.


ರಾಜ್ಯದಲ್ಲಿ ಪಕ್ಷದ ಮೇಲಿನ ಬಿ.ಎಸ್​. ಯಡಿಯೂರಪ್ಪ ಅವರ ಹಿಡಿತವನ್ನು ತಪ್ಪಿಸುವ ಏಕೈಕ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡ್​ ಕರಾವಳಿ ಭಾಗದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ, ಇದೀಗ ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ನಳಿನ್ ಕುಮಾರ್ ಕಟೀಲ್ ಪಕ್ಷದ ಆಯಾ ಕಟ್ಟಿನ ಹುದ್ದೆಗಳಿಗೆ ಬಿಎಸ್​ವೈ ವಿರೋಧಿ ಬಣದ ನಾಯಕರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.


ಆದರೆ, ಇದೀಗ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಇಬ್ಬರೂ ನಾಯಕರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೂತನ ಆದೇಶ ಹೊರಡಿಸಿದ್ದಾರೆ. ಈ ನಡುವೆ ಬಿಎಸ್​ವೈ ಅವರನ್ನು ಕೆರಳಿಸುವ ಸಲುವಾಗಿಯೇ ಈ ಆದೇಶ ಹೊರಡಿಸಲಾಗಿದೆ ಎಂದು ಕೆಲವು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ತೆರೆ ಮರೆಯಲ್ಲಿದ್ದ ಬಿಎಸ್​ವೈ ಮತ್ತು ನಳಿನ್ ಕುಮಾರ್ ನಡುವಿನ ಮುಸುಕಿನ ಗುದ್ದಾಟ, ಇದೀಗ ಈ ಆದೇಶದ ಮೂಲಕ ಬಟಾಬಯಲಾದಂತಿದೆ.


Find out more: