ಪ್ರಸ್ತುತ ಉಪ ಚುನಾವಣೆ ಮುಂದೂಡಿದ್ದು, ಭಾರತೀಯ ಜನತಾ ಪಕ್ಷಕ್ಕೆ ನಿರಾಳವಾಗಿದೆ. ಪ್ರಸ್ತುತ ಗಣಿನಾಡು ಬಳ್ಳಾರಿಯಲ್ಲಿ ರಾಜಕೀಯ ವಿದ್ಯಮಾನಗಳೇ  ಬದಲಾಗ ತೊಡಗಿವೆ. ಅದೇನೆಂದರೆ ಬಳ್ಳಾರಿ ಕಾಂಗ್ರೆಸ್  ಮಾಜಿ ಶಾಸಕರಾದ ಅನಿಲ್ ಲಾಡ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. 


ಬಳ್ಳಾರಿಯ ಕಾಂಗ್ರೆಸ್ ಮಾಜಿ ಶಾಸಕರಾದ  ಅನಿಲ್ ಲಾಡ್   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಲಿದ್ದು, ಅಧಿಕೃತವಾಗಿ ಬಿಜೆಪಿ ಸೇರಲಿರುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ವಿಷಯವಾಗಿದೆ. ಈ ಬಗ್ಗೆ ಈಗಾಗಲೇ ಆರೋಗ್ಯ ಸಚಿವ ಶ್ರೀರಾಮುಲು ಜೊತೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಇಂದು ಮಾಜಿ ಸಚಿವ ಯುಟಿ ಖಾದರ್ ಕೂಡ ಮುಖ್ಯಮಂತ್ರಿ ಬಿಎಸ್​ವೈ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಇದೆಲ್ಲವನ್ನು ಗಮನಿಸುತ್ತಿದ್ದರೇ ರಾಜ್ಯ ರಾಜಕೀಯದಲ್ಲಿ ಕಮಲ ಅರಳಿಸಿ, ಮುಂದುವರೆಸಲು ಏನನ್ನೋ ಮಾಡುತ್ತಿರುವಂತೆ ಭಾಸವಾಗುತ್ತಿದೆ.



ರಾಜ್ಯ ಕಾಂಗ್ರೆಸ್​-ಜೆಡಿಎಸ್ ಪಕ್ಷದ ಹಲವು ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿದ ನಂತರ ಎರಡೂ​ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಿದೆ. ಅನರ್ಹ ಶಾಸಕರು ತಮ್ಮ ಪ್ರಕರಣದ ತೀರ್ಪು ಹೊರಬಿದ್ದ ಕೂಡಲೆ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಇನ್ನೊಂದೆಡೆ ಜೆಡಿಎಸ್​ ಪಕ್ಷದಲ್ಲಿ ಜಿ.ಟಿ. ದೇವೇಗೌಡ, ಎಸ್​.ಆರ್. ಶ್ರೀನಿವಾಸ್​ ಸೇರಿದಂತೆ ಕೆಲವು ನಾಯಕರು ಒಂದು ಕಾಲನ್ನು ಬಿಜೆಪಿಯಲ್ಲಿಟ್ಟಾಗಿದೆ. ಈ ನಡುವೆ ಕಾಂಗ್ರೆಸ್​ನಲ್ಲಿ ಕೂಡ ಭಿನ್ನಮತ ಹೆಚ್ಚಾಗುತ್ತಿದೆ. ಇದೆಲ್ಲವೂ ಬಿ ಜೆ ಪಿಗೆ ಪ್ಲಸ್ ಪಾಯಿಂಟ್ ಆಗೋದರಲ್ಲಿ ಎರಡು ಮಾತಿಲ್ಲ. 


ಕಾಂಗ್ರೆಸ್​ ಶಾಸಕರನ್ನು ಮುಂಬೈ ಹೋಟೆಲ್​ನಲ್ಲಿರಿಸಿರುವ ಬಿಜೆಪಿ ಕೈ ಶಾಸಕರಿಗೆ ಕೋಟಿಗಟ್ಟಲೆ ಹಣ ನೀಡಿದೆ ಎಂದು ಆಕ್ರೋಶ ಹೊರಹಾಕಿದ್ದ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಇದೀಗ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಈ ಮೂಲಕ ಅನಿಲ್ ಲಾಡ್​ ಅವರಿಂದಲೇ ಕಾಂಗ್ರೆಸ್​ನಲ್ಲಿ ಮತ್ತೊಮ್ಮೆ ರಾಜೀನಾಮೆ ಪರ್ವ ಆರಂಭವಾಗುವ ಸಾಧ್ಯತೆಯಿದೆ. ಈ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ. ಖಾದರ್ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.


Find out more: