ರಾಮನಗರ: ಕಳೆದೆರಡು ತಿಂಗಳುಗಳಿಂದ ರಾಜ್ಯದಲ್ಲಾದ  ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ರಾಜ್ಯ ತತ್ತರಿಸಿ ಹೋಗಿದೆ. ಸುಮಾರು 40 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಇನ್ನೇನು ಬೀದಿ ಗಿಳಿದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಕೇಂದ್ರ ಮಧ್ಯಂತರ ನೆರೆ ಪರಿಹಾರವೆಂದು 1200 ಕೋಟಿಗಳನ್ನು ಬಿಡುಗಡೆ ಮಾಡಿ ಅಡ್ಡಗೋಡೆ ಮೇಲೆ ದೀಪ ವಿಟ್ಟಂತೆ ಮಾಡಿತ್ತು. ಇದಕ್ಕೆ ಸಂಪೂರ್ಣ ಹಣ ಬಿಡುಗಡೆ ಮಾಡಬೇಕೆಂದು ಪ್ರತಿಪಕ್ಷಗಳು ಹರಿಹಾಯ್ದಿವೆ. ಇದಕ್ಕೀಗ ರಾಜ್ಯ ಬಿಜೆಪಿ ಸಚಿವರೊಬ್ಬರು ಉತ್ತರಿಸಿದ್ದಾರೆ. 


ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ. ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮವಾಗಿ 1 ಲಕ್ಷ ರೂ. ಹಾಗೂ 10 ಸಾವಿರ ರೂ. ತಲುಪಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ ಟಿ ಆರ್ ಎಫ್‍) ನಿಂದ 4,138 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಎನ್‍ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7,200 ಕೋಟಿ ರೂ. ಸಿಕ್ಕಿದೆ. ಅದರ ಅಂಕಿ-ಅಂಶ ಬೇಕಾದರೆ ವಿಧಾನಸೌಧದಲ್ಲೂ ಮುಂದಿಡುತ್ತೇವೆ. ಯಾವುದೇ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದು ಅಂಕಿ ಅಂಶಗಳ ಸಹಿತ ವಿವರ ನೀಡಿದರು.

ಎನ್‍ಡಿಆರ್‍ಎಫ್ ಗೈಡ್‍ ಲೈನ್ಸ್ ಪ್ರಕಾರ ಎಷ್ಟು ನೀಡಬೇಕೋ ಅಷ್ಟನ್ನು ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜಕಾರಣ ಮಾಡೋದಕ್ಕೆ ಬೇರೆ ಬೇರೆ ವೇದಿಕೆಗಳಿವೆ. ಅಲ್ಲಿ ರಾಜಕಾರಣ ಮಾಡೋಣ. ಆದರೆ ಬರದ ವಿಚಾರದಲ್ಲಿ, ಅತಿವೃಷ್ಟಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ, ಹೆಚ್‍ ಡಿ ಕೆ ಸಿಎಂ ಆಗಿದ್ದಾಗ ಒಂದು ಮನೆಗೆ 96 ಸಾವಿರ ರೂ. ಕೊಡುತ್ತಿದ್ದರು. ನಾವು 5 ಲಕ್ಷ ರೂ. ಕೊಡುತ್ತಿದ್ದೇವೆ. ಅದು ನಮ್ಮ ತಪ್ಪಾ ಎಂದು ಸಚಿವರು ಪ್ರಶ್ನಿಸಿದರು.


Find out more: