ಬೆಂಗಳೂರು: ಸದಾ ಕಾಲ ಕಳ್ಳರ ಹುಡುಕುವಲ್ಲಿ, ನಗರ ರಕ್ಷಣೆಯಲ್ಲಿ, ಶಾಂತಿ ಶಿಸ್ತು ಕಾಪಾಡುವುದರಲ್ಲಿ ಕಾರ್ಯ ನಿರತರಾಗಿರುವ ಪೋಲಿಸರು ಇಂದು ವಿಶ್ವ ವಿಖ್ಯಾತ ನಾಡಹಬ್ಬ ದಸರಾದ ಆಯುಧ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಕಮೀಷನರ್ ಕಚೇರಿ ಸೇರಿದಂತೆ ಬಹುತೇಕ ಠಾಣಾ ಕಛೇರಿಗಳಲ್ಲಿ ನೆರವೇರಿಸಿದರು. 


ಇನ್ ಫ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಜೃಂಭಣೆಯಿಂದ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಆಚರಿಸಿ, ಸಂಭ್ರಮಿಸಲಾಯಿತು. ಕಮೀಷನರ್ ಕಚೇರಿಗೆ ದೀಪದ ಅಲಂಕಾರ ಮಾಡಿ, ನವರಾತ್ರಿ ಪ್ರಯುಕ್ತ ವಿಶೇಷ ಗೊಂಬೆಗಳ ಪ್ರದರ್ಶನವನ್ನು ಮಾಡಲಾಗಿತ್ತು. ಆಯುಧಪೂಜೆ ಕಾರ್ಯದಲ್ಲಿ ಭಾಗಿಯಾದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಸಿಹಿ ಹಂಚಿ ದಸರಾ ಹಬ್ಬದ ಶುಭಾಶಯ ಕೋರಿದರು.


ಚಾಮರಾಜಪೇಟೆಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕೇಂದ್ರದಲ್ಲು ಅದ್ದೂರಿಯಾಗಿ ಆಯುಧಪೂಜೆ ಆಚರಿಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಬಳಸಲಾಗಿದ್ದ ಪುರಾತನ ಪೊಲೀಸ್ ರೈಫಲ್ಸ್ ಸೇರಿದಂತೆ ಲೈಟ್ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್, ಎಕೆ 47, ಡಿ-ಸ್ಯಾಟ್ ವಾಹನಗಳು ಸೇರಿದಂತೆ ಆಧುನಿಕ ಮಾದರಿಯ ಆಯುಧಗಳಿಗೆ ಪೂಜೆ ಸಲ್ಲಿಸಲಾಯ್ತು. ಜೊತೆಗೆ ಕಮೀಷನರ್ ಕಚೇರಿ, ಸಿ.ಎ.ಆರ್ ಗ್ರೌಂಡ್ಸ್ ಸೇರಿದಂತೆ ಸಿಸಿಬಿ‌ ಕಚೇರಿಯ ಪೊಲೀಸ್ ವಾಹನಗಳಿಗೆ ಆಯುಧ ಪೂಜೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತರುಗಳಾದ ಉಮೇಶ್, ಮುರುಗನ್, ಸೇರಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಭಾಗಿಯಾಗಿದ್ದರು.


ನಗರದ ಪ್ರಮುಖ ಪೊಲೀಸ್ ಕಚೇರಿಗಳು ಸೇರಿದಂತೆ 110ಕ್ಕು ಹೆಚ್ಚು ಪೊಲೀಸ್ ಠಾಣೆಗಳಲ್ಲೂ ಇಂದು ಆಯುಧ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯ್ತು. ಪ್ರತಿನಿತ್ಯ ಕಚೇರಿಗಳಲ್ಲೆ ಹೆಚ್ಚು ಕಾಲ ಕಳೆಯುತ್ತಿದ್ದ ಪೊಲೀಸರು ಇಂದು ತಮ್ಮ ಕುಟುಂಬದವರ ಜೊತೆಗೂ ಹಬ್ಬದ ರೂಪದಲ್ಲಿ ಕಾಲ ಕಳೆಯುವಂತಾಯ್ತು. ಒತ್ತಡದಲ್ಲೆ ಕೆಲಸ ಮಾಡುವ ಪೊಲೀಸರಿಗೆ ಆಯುಧ ಪೂಜೆ ಮತ್ತು ಚಾಮುಂಡಶ್ವರಿ ಪೂಜೆ ಹೆಚ್ಚು ಸಂತಸ ಮೂಡಿಸಿದ್ದಂತು ಸತ್ಯ. ಕುಟುಂಬದೊಂದಿಗೆ ಆಯುಧ ಪೂಜಾ ಮಾಡಿದ್ದು ಅತ್ಯಂತ ಸಂಭ್ರಮ ತಂದಿದೆ ಎಂದು ತಿಳಿಸಿದರು


Find out more: