ಬೆಂಗಳೂರು: ಗುರುವಾರದಿಂದ ಚಳಿಗಾಲದ ಅಧಿವೇಶನ ಶುರುವಾಗಿದೆ. ಅದು ಕೇವಲ ಮೂರು ದಿನಗಳು ಮಾತ್ರ. ಇದನ್ನು ವಿರೋಧಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾ ಕಲಾಪವನ್ನು ಇನ್ನೂ ೬ ದಿನಗಳು ವಿಸ್ತರಿಸ ಬೇಕೆಂದು ಒತ್ತಾಯಿಸಿದ್ದಾರೆ.  ಆದರೆ ಮೂರು ದಿನ ನೆರೆ ಹಾಗೂ ಕನಿಷ್ಠ ಮೂರು ದಿನ ಬಜೆಟ್ ಕುರಿತು ಚರ್ಚೆ ನಡೆಯಬೇಕಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇವೆಲ್ಲವೂ ಚರ್ಚೆಯಾಗುತ್ತಿತ್ತು, ನೀವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿಲ್ಲ ಯಡಿಯೂರಪ್ಪನವರೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೀರ, ನಿಮಗೆಲ್ಲಾ ತಿಳಿದಿದೆ ಪಲಾಯನ ವಾದ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಉಪ ಚುನಾವಣೆಯಿದ್ದ ಕಾರಣ ಕೇವಲ ಮೂರು ದಿನದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಅಧಿವೇಶನವನ್ನು ವಿಸ್ತರಿಸಲು ಅವಕಾಶ ಇದ್ದಾಗ್ಯೂ ರಾಜ್ಯ ಬಿಜೆಪಿ ಸರ್ಕಾರ ಕೇವಲ ಮೂರೇ ದಿನದಲ್ಲಿ ಅಧಿವೇಶನ ಮುಗಿಸಲು ಮುಂದಾಗಿದೆ. ಈ ಮೂರು ದಿನದಲ್ಲೇ ನೆರೆ ಪರಿಹಾರ, ಬಜೆಟ್ ಮಂಡನೆ ಹಾಗೂ ಬಜೆಟ್ ಮೇಲಿನ ಚರ್ಚೆ ನಡೆಯಬೇಕಿರುವ ಪರಿಸ್ಥಿತಿ ಉಂಟಾಗಿದೆ. ಎರಡನೇ ದಿನದ ಅಧಿವೇಶನದ ಭಾಷಣದಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಅವರು ಪ್ರವಾಹದ ಪರಿಸ್ಥಿತಿ ಗಂಭೀರವಾದ ವಿಚಾರ. ಜನರಿಗೆ ತಿನ್ನಲು ಅನ್ನ ವಿಲ್ಲದೆ, ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 


 ಅರ್ಧ ರಾಜ್ಯವೇ ಪ್ರವಾಹಕ್ಕೆ ತುತ್ತಾಗಿದೆ. ಆ ಭಾಗದ ಶಾಸಕರು ಸದನಲ್ಲಿ ಅಭಿಪ್ರಾಯ ತಿಳಿಸಬೇಕು. ಹೀಗಾಗಿ ಸದನ ವಿಸ್ತರಣೆ ಮಾಡಿ. ಅದನ್ನು ಬಿಟ್ಟು ಇಂದೇ 1 ಗಂಟೆಯ ಒಳಗಾಗಿ ಈ ಕುರಿತ ಚರ್ಚೆಯನ್ನು ಮುಗಿಸಬೇಕು ಎಂಬುದು ಸರಿಯಲ್ಲ. ಇದೊಂದು ಜನ ವಿರೋಧಿ ನಿಲುವು ಎಂದು ಕಿಡಿಕಾರಿದ್ದಾರೆ. ರಾಜ್ಯ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನಾನು 13 ಬಜೆಟ್ ಮಂಡಿಸಿದ್ದೇನೆ, ಬಜೆಟ್ ಮೇಲೆ ಹೆಚ್ಚಿನ ಚರ್ಚೆಯಾಗಬೇಕು. 30 ರವರೆಗೆ ಬಜೆಟ್ ಪಾಸು ಮಾಡಿಕೊಳ್ಳಬಹುದು, ಸಪ್ಲಿಮೆಂಟರಿ ಬಜೆಟ್ ಬೇಕಾದರೆ ಪಾಸ್ ಮಾಡೋಣ. ಆದರೆ, ಬಜೆಟ್ ಮಂಡಿಸೋಕೆ ತರಾತುರಿಯೇಕೆ? ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸದೆ ಇರುವುದು ಸರಿಯಾದ ತೀರ್ಮಾನವಲ್ಲ ಎಂದು ಇಂದು ಕಲಾಪದಲ್ಲಿ ಸಿದ್ದರಾಮಯ್ಯ ಗುಡುಗಿದ್ದಾರೆ.


Find out more: