ಕಳೆದೆರಡು ತಿಂಗಳುಗಳಿಂದ ರಾಜ್ಯವು ಅಕ್ಷರಶಹ ಪ್ರವಾಹಕ್ಕೆ ಸಿಲುಕಿ ಜನ ಜಾನುವಾರು, ಬೆಳೆದ ಬೆಳೆ ಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಜ್ಯದ ಜನರ ಪ್ರತಿಭಟನೆಯ ಬಿಸಿ ತಟ್ಟಿದಾಗ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ 1200 ಕೋಟಿ ಗಳನ್ನಷ್ಟೇ ಬಿಡುಗಡೆ ಮಾಡಿದ್ದರು. ರಾಜ್ಯದ ಖಜಾನೆ ಖಾಲಿ ಎಂದು ಯಡಿಯೂರಪ್ಪ ನವರು ಬಹಿರಂಗ ವಾಗಿಯೇ ಹೇಳಿಕೆ ನೀಡಿದ್ದು, ರಾಜ್ಯ ಇಕ್ಕಟ್ಟಿನ ಸ್ಥಿತಿಗೆ ತಲುಪಿತ್ತು. ಪ್ರಸ್ತುತ ರಾಜ್ಯ ಸರ್ಕಾರ ರೈತರಿಗೆ ಬಂಪರ್ ದೀಪಾವಳಿ ಗಿಪ್ಟ್ ಘೋಷಿಸಿದ್ದಾರೆ.
ನೀರಾವರಿ ಆಶ್ರಿತ ಬೆಳೆಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹತ್ತು ಸಾವಿರ ರೂ. ನೀಡಲಿದೆ ಎಂದು ಘೋಷಿಸಿರುವುದು ರೈತರಿಗೆ ಸಮಾಧಾನ ತಂದಿದೆ.
ಒಣ ಬೇಸಾಯದ ಬೆಳೆಗೆ ಮೊದಲು ಆರು ಸಾವಿರ ಹಾಗೂ ನೀರಾವರಿ ಬೆಳೆಗೆ 13 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಇದೇ ಮೊದಲ ಸಲ ಹತ್ತು ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ ಐದು ಲಕ್ಷ ರೂಪಾಯಿ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿ ಎಂದರು. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಔರಾದಕರ ವರದಿಯನ್ನು ತಕ್ಷಣ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವ ಬಗ್ಗೆ ಚರ್ಚೆ ನಡೆದಿದ್ದು, ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಮಹಾರಾಷ್ಟ್ರ ರಾಜ್ಯದ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗಾವಿಗೆ ಆಗಮಿಸಿದ್ದರು. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ ಇತರರು ಇದ್ದರು. ಇಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.