ಬೆಂಗಳೂರು: ಯಾರಾದರೂ ಸರಿಯೇ ಪಕ್ಷದ ವಿರುದ್ಧ ಮಾತನಾಡುವಂತಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯೇ ಆಗಿರಲಿ ಅವರು ಪಕ್ಷಕ್ಕೆ ಕಾರ್ಯಕರ್ತರಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ತಿಳಿಸಿದ್ದಾರೆ. ಯಾರಿಗೆ ಈ ಮಾತು ಪರೋಕ್ಷವಾಗಿ ತಿಳಿಸಿದ್ದಾರೆ ಎಂದು ನಾವು ಹೇಳ್ತೇವೆ ನೋಡಿ. ಪಕ್ಷಕ್ಕೆ ಅದರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್​ ಕುಮಾರ್​ ಕಟೀಲ್ ಪರೋಕ್ಷವಾಗಿ​ ಕಿಡಿಕಾರಿದ್ದಾರೆ. ಯತ್ನಾಳ್ ಅವರಿಗೆ ಪಕ್ಷದಿಂದ ಶೋಕಾಸ್ ನೋಟಿಸ್​ ನೀಡಿದ್ದರೂ ಅದಕ್ಕೆ ಉತ್ತರಿಸದ ಹಿನ್ನಲೆಯಲ್ಲಿ ಯಾದಗಿರಿ ನಗರದ ಸರ್ಕಿಟ್ ಹೌಸ್​ನಲ್ಲಿ ಗುರುವಾರ ನಳಿನ್​ ಕುಮಾರ್ ಕಟೀಲ್ ಗುಡುಗಿದ್ದಾರೆ.



ಪಕ್ಷದಿಂದ ಬಿ ಫಾರ್ಮ್ ಪಡೆದ ಮೇಲೆ ಪಕ್ಷದ ನೀತಿ-ನಿಯಮದ ಚೌಕಟ್ಟಿನಲ್ಲಿ ಮಾತನಾಡಬೇಕು. ಏನಾದರೂ ವ್ಯತ್ಯಾಸವಾದರೆ ಮೇಲಿಂದ ವಿವರಣೆ ಕೇಳುವುದು ಸಹಜ. ಇದೀಗ ವಿವರಣೆ ಕೇಳಿದ್ದಾರೆ. ಹಾಗಾಗಿ ವಿವರಣೆ ಕೊಡಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ. ನಾನು ರಾಜ್ಯಾಧ್ಯಕ್ಷನಾದರೂ ನನ್ನಿಂದ ತಪ್ಪು ನಡೆದರೆ, ವಿವರಣೆ ಕೇಳುತ್ತಾರೆ. ಆಗ ವಿವರಣೆ ಕೊಡುವುದು ನನ್ನ ಜವಾಬ್ದಾರಿಯೂ ಆಗಿದೆ ಎಂದರು. ಏನಾದರೂ ವ್ಯತ್ಯಾಸ ಇದ್ದರೆ ಹಿರಿಯರ ಜತೆ ಮಾತಾಡೋಣ ಅದರಲ್ಲೇನು ತಪ್ಪಿದೆ? ವಿವರಣೆ ಕೇಳಿದಾಗ ಉತ್ತರ ಕೊಡದಿದ್ದರೆ, ಅದು ಅಹಂಕಾರವಾಗುತ್ತದೆ. ಮುಂದೆ ಎಲ್ಲದಕ್ಕೂ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದು ಪರೋಕ್ಷವಾಗಿ ಯತ್ನಾಳ್​ಗೆ ಚಾಟಿ ಬೀಸಿದರು.


ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಕಟೀಲ್ ಬೆಂಬಲಿಗರ ಕಿತ್ತಾಟ ವಿಚಾರವಾಗಿ ಮಾತನಾಡಿ, ಈ ತರಹದ ಯಾವುದೇ ಘಟನೆಗಳು ನಡೆದಿಲ್ಲ. ಇದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಆದಂತಹ ತಪ್ಪು ಕಲ್ಪನೆಗಳು. ನನ್ನ ಮತ್ತು ಸಿಎಂ ಯಡಿಯೂರಪ್ಪ ಮಧ್ಯ ಸಣ್ಣ ವ್ಯತ್ಯಾಸವೂ ಇಲ್ಲ. ನಾನು ಎಲ್ಲಾ ಮಾಹಿತಿಯನ್ನು ಅವರ ಮುಖಾಂತರವೇ ತಿಳಿದುಕೊಳ್ಳುತ್ತಿದ್ದೇನೆ. ಈ ರಾಜ್ಯದ ಮಾರ್ಗದರ್ಶಕರೂ ಹಾಗೂ ರಾಜ್ಯದ ಸುಪ್ರೀಂ ಅವರೇ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ ಎಂದು ಹೇಳಿದರು

Find out more: