ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ, ಪಕ್ಷವನ್ನು ಗೆಲ್ಲಿಸಿದರೆ ಕರ್ನಾಟಕ ರಾಜ್ಯದಿಂದ ಕೃಷಿ ಮತ್ತು ಕುಡಿಯಲು ನೀರು ಪೂರೈಕೆ ಮಾಡಲಾಗುವುದೆಂದು ಸಿಎಂ ಯಡಿಯೂರಪ್ಪ ಮಹಾರಾಷ್ಟ್ರ ಜನತೆಗೆ ಆಶ್ವಾಸನೆ ನೀಡಿದ್ದು, ರಾಜಾದ್ಯಂತ ವಿವಾದಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಗಡಿ ಭಾಗದಲ್ಲಿ ಚುನಾವಣಾ ಪ್ರಚಾರದ ವೇಳೆ ಜತ್ ತಾಲೂಕಿನಲ್ಲಿ ಮಾತನಾಡಿದ ಅವರು, ಇಲ್ಲಿ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿದೆ.
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿ.ಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳ 1ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಗೊತ್ತಿದೆ. ಹೀಗಾಗಿ ರಾಜ್ಯದ ಅಧಿಕಾರಿಗಳು ಹಾಗೂ ಮಹಾರಾಷ್ಟ್ರ ಸಿಎಂ ಘಡ್ನವೀಸ್ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
ಮಹಾರಾಷ್ಟ್ರ ಹಾಗೂ ಕರ್ನಾಟಕ ಬೇರೆಯಲ್ಲ. ನೀರಿಲ್ಲದಿದ್ದರೆ ಬದುಕಲು ಆಗಲ್ಲ. ರೈತರ ಹೊಲಕ್ಕೆ ನೀರು ಬೇಕು, ರೈತರು ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ 2 ಪಟ್ಟು ಹೆಚ್ಚಾಗಬೇಕು ಅಂತ ಪ್ರಧಾನಿ ಮೋದಿ ಅಪೇಕ್ಷೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಯಾವ ರೀತಿ ಅನುಕೂಲ ಮಾಡಲಿಕ್ಕೆ ಸಾಧ್ಯ ಇದೆಯೋ, ಚರ್ಚೆ ಮಾಡಿ ಸಹಕಾರ ನೀಡುತ್ತೇನೆ ಎಂದು ಬಿಎಸ್‌ವೈ ಆಶ್ವಾಸನೆ ನೀಡಿದ್ದಾರೆ.
ಇದೀಗ ಈ ಹೇಳಿಕೆ ರಾಜ್ಯಾದ್ಯಂತ ಭಾರೀ ವಿವಾದವಾಗಿದೆ. ಇದೀಗ ಈ ಹೇಳಿಕೆ ಹಿಂಪಡೆಯಲು ಕಾಂಗ್ರೆಸ್ ಆಗ್ರಹ. 'ರಾಜ್ಯದ ಹಿತವನ್ನು ಮರೆತು ಮತಗಳಿಗಾಗಿ ಮಹಾರಾಷ್ಟ್ರಕ್ಕೆ ನೀರು ಕೊಡುತ್ತೇವೆಂದು ಹೇಳಿದ್ದು, ರಾಜ್ಯಕ್ಕೆ ಮಾಡಿದ ದ್ರೋಹ. ಈಗಾಗಲೇ ಮಹದಾಯಿ ವಿಷಯದಲ್ಲಿ ಬಿಜೆಪಿಯ ಬೇಜವಾಬ್ದಾರಿತನದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸಿಎಂ ಆಗಿ ಈ ನಿಮ್ಮ ನಡೆ ಖಂಡನೀಯ. ನಿಮ್ಮ ಹೇಳಿಕೆ ವಾಪಸ್ ಪಡೆಯಿರಿ, ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.