ಹಾಸನ: ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಮತ್ತು ನಮ್ಮ ಕುಟುಂಬ ರಾಜಕೀಯ ಜೀವನದಲ್ಲಿ ಮಾಡಿರುವ ಸಾಧನೆಗಳು ಜನರ ಮನಸ್ಸಿ ನಲ್ಲಿವೆ. ಆದರೂ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಕುಟುಂಬದ ಹೆಸರನ್ನು ಹಾಕದೆ ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಹಾಸನಾಂಬ ದೇಗುಲದ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿನ ದೋಷ, ಜಿಲ್ಲಾಡಳಿತ ಮತ್ತು ಆಡಳಿತ ಪಕ್ಷದ ಕುರಿತು ಪರೋಕ್ಷವಾಗಿ ಎಚ್.ಡಿ.ರೇವಣ್ಣ ಸಿಡಿಲಬ್ಬರದಂತೆ ಕಿಡಿಕಾರಿದ್ದಾರೆ.
ಹೊಳೆನರಸೀಪುರ ಪಟ್ಟಣದ ಪುರದೈವ ಲಕ್ಷ್ಮೇನರಸಿಂಹಸ್ವಾಮಿ ದೇವಾಲಯದ ಹೊರ ಗೋಡೆಗಳ ಪುನರ್‌ನಿರ್ಮಾಣ ಮತ್ತು ಇನ್ನಿತರೆ ಕಾಮಗಾರಿಗಳಿಗೆ ದೇವಾಲಯದ ಆವರಣದಲ್ಲಿ ಪೂಜೆಯನ್ನು ಶುಕ್ರವಾರ ಪೂರೈಸಿದರು. ಹಾಸನಾಂಬ ದೇಗುಲಕ್ಕೆ ನಾವು ನಮ್ಮ ಕುಟುಂಬ ಇವರಿಂದ ಹೆಸರು ಹಾಕಿಸಿಕೊಂಡು ದೇವಸ್ಥಾನಕ್ಕೆ ತೆರಳಬೇಕೆ? ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ಗಳು ಆಹ್ವಾನ ಪತ್ರಿಕೆ ಸಿದ್ಧ ಪಡಿಸುವಾಗ ಶಿಷ್ಟಾಚಾರ ಪಾಲಿಸ ಬೇಕಿತ್ತು. ಆದರೆ, ಬೇಕೆಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸಂಸದ ಪ್ರಜ್ವಲ್ ರೇವಣ್ಣ ಮತ್ತು ನಮ್ಮಗಳ ಹೆಸರನ್ನು ಕೈಬಿಟ್ಟು ಹೀಗೆಲ್ಲಾ ಮಾಡಿದ್ದಾರೆ. ಇರಲಿ ಬಿಡಿ, ಅವರೆಲ್ಲಾ ಈ ಮಟ್ಟದ ರಾಜಕಾರಣ ಮಾಡೋದಾದ್ರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇದರ ಕುರಿತು ಗಮನಹರಿಸಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅವರು ಕೊಟ್ಟಿರುವ ಪಾಸ್ ಅನ್ನು ಸಹ ನಾನು ವಾಪಾಸ್ ಕೊಟ್ಟಿದ್ದೇನೆ ಎಂದು ಗುಡುಗಿದ್ದಾರೆ.
ಹುಣಸೂರು ತಾಲೂಕನ್ನು ಕೇಂದ್ರವಾಗಿಸಿ ಕೊಂಡು ಪ್ರತ್ಯೇಕ ಜಿಲ್ಲೆ ರಚಿಸುವಂತೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಇಟ್ಟಿರುವ ಬೇಡಿಕೆಯ ಕುರಿತು ಪ್ರತಿಕ್ರಿಯಿಸಲು ರೇವಣ್ಣ ಬಲ್ ಕುಲ್ ನಿರಾಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಎಚ್.ವಿ. ಪುಟ್ಟರಾಜು, ಕೆ.ಆರ್. ಸುಬ್ರಹ್ಮಣ್ಯ, ಸದಸ್ಯ ಎಚ್.ಕೆ.ಪ್ರಸನ್ನ, ನಿಂಗಯ್ಯ, ಸೊಪ್ಪಿನ ಶಿವಣ್ಣ, ಎಸ್.ಎ.ರಘು ಮೊದಲಾದವರು ಹಾಜರಿದ್ದರು. ಹಾಸನಾಂಬೆ ದೇಗುಲದ ಆಮಂತ್ರಣದ ಕುರಿತು ಈ ರೀತಿ ರೇವಣ್ಣನವರು ಹೇಳಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ತುಂಬಾ ಸಿಟ್ಟಾಗಿದ್ದಾರಂತೆ. ಮುಂದೆ ಇವರಿಗೆಲ್ಲಾ ತಕ್ಕ ಪಾಠ ಮಾಡುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.