ಮೈಸೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಭಾರತೀಯ ಜನತಾ ಪಕ್ಷದ ವಿರುದ್ಧ ಬಿಜೆಪಿಯು ಕುತಂತ್ರಿ ಪಕ್ಷ ಎಂದು ಗುಡುಗಿದ್ದಾರೆ. ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಮತ ಹಾಕಿಲ್ಲ. ಕೆಲವರಿಗೆ ಯಾವುದು ದೊಡ್ಡ ವಿಚಾರ ಎಂದು ತಿಳಿಯಲಿಲ್ಲ ಎಂದರು. ಬಿಜೆಪಿ ಜನರ ತಲೆ ಕೆಡಿಸಿತು‌. ಮೈತ್ರಿ ಸರ್ಕಾರವನ್ನು ಬಿಳಿಸಿ ಕುತಂತ್ರದಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. 


ವೀರಶೈವ ಲಿಂಗಾಯತ ಧರ್ಮದ ವಿಚಾರ, ಟಿಪ್ಪು ಜಯಂತಿ, ಸದಾಶಿವ ಆಯೋಗದ ವಿಚಾರವನ್ನೇ ದೊಡ್ಡ ವಿಚಾರ ಅಂತ ಬಿಂಬಿಸಿದರು. ಇವೆಲ್ಲ ದೊಡ್ಡ ವಿಚಾರಗಳಾ? ಸುಮ್ಮನೆ ಸುಳ್ಳು ಪ್ರಚಾರ ಮಾಡಿದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಕರ್ನಾಟಕದ ಎಲ್ಲ‌ ಭಾಗದಿಂದ ಪ್ರತಿಕ್ರಿಯೆ ಬಂದಿದೆ. ಕಾಂಗ್ರೆಸ್ ಒಳ್ಳೆಯ ತೀರ್ಮಾನ ಕೈಗೊಂಡಿದೆ ಅಂತ ಅಭಿನಂದನೆ ಹೇಳುತ್ತಿದ್ದಾರೆ ಎಂದರು. ನಮ್ಮ ರಾಷ್ಟ್ರದ ಮಾಧ್ಯಮಗಳು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಶರಣಾಗಿ ಹೋಗಿವೆ. ಬಿಜೆಪಿ ವಿರುದ್ದ ಹೋದ್ರೆ ಮಾಧ್ಯಮಗಳ ಲೈಸನ್ಸ್ ರದ್ದು ಮಾಡಿ ಸಂಸ್ಥೆಗಳ ಮೇಲೆ ಸಿಬಿಐ ರೇಡ್ ಮಾಡುತ್ತಾರೆ.

ಕೆಲ ಸಂಸ್ಥೆಗಳ ಮೇಲೆ ಈಗಾಗಲೇ ರೇಡ್ ಮಾಡಿದ್ದಾರೆ. ನೂರಾರು ಕೋಟಿ ಬಂಡವಾಳ ಹಾಕಿರೋ ಮಾಧ್ಯಮಗಳು ಸಹಜವಾಗಿಯೇ ಹೆದರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷರು ವಿಷಾದಿಸಿದರು.ಗಾಂಧಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ವೀರ ಸಾವರ್ಕರ್ ಭಾರತ ರತ್ನ ನೀಡಲು ಮುಂದಾಗುತ್ತಿದೆ. ವೀರ ಸಾವರ್ಕರ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು. ಗೋಡ್ಸೆಗೆ ಸಾವರ್ಕರ್ ಆಪ್ತರಾಗಿದ್ದರು.


ಇಂಥವರಿಗೆ ಭಾರತ ರತ್ನ ನೀಡೋದು ಸರಿಯೇ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಪ್ರಶ್ನೆ ಮಾಡಿದರು. ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಏನು ಕೇಳಿದ್ರು ಹಣವಿಲ್ಲ ಅಂತಾರೆ. ಖಜಾನೆ ಬರಿದಾಗಿದೆಯಂತೆ. ಅಧಿಕಾರ ನಡೆಸಲು ನಿಮಗೆ ಸಾಧ್ಯವಾಗಲಿಲ್ಲ ಅಂದ್ರೆ ಸಿಎಂ ಸ್ಥಾನ ಬಿಟ್ಟು ಹೋಗಿ. ನಮಗೆ ಅಧಿಕಾರ ಕೊಡಿ. ನಮಗೆ ಹಣ ಹೇಗೆ ತರಬೇಕು ಅದನ್ನ ಹೇಗೆ ಖರ್ಚು ಮಾಡಬೇಕು ಎಂಬುದು ಗೊತ್ತು ಎಂದು ಗುಡುಗಿದ್ದಾರೆ.


Find out more: