ನವದೆಹಲಿ: ಮಾಜಿ ಸಚಿವ ಕನಕಪುರ ಶಾಸಕ ಡಿ. ಕೆ ಶಿವಕುಮಾರ್ ಅಕ್ರಮ ಹಣ ಕುರಿತಾದ ಪ್ರಕರಣ ವಾಗಿ ತಿಹಾರ್ ಜೈಲು ಪಾಲಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ಇ. ಡಿ ಫುಲ್ ವಿಚಾರಣೆ ನಡೆಸಿದೆ. ಇದೀಗ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿ. ಕೆ. ಶಿವಕುಮಾರ್ ರನ್ನು  ಇಂದು ಭೇಟಿಯಾಗಲಿದ್ದಾರೆ. ಕಳೆದ 10 ದಿನಗಳ ಹಿಂದೆ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸೋನಿಯಾ ಗಾಂಧಿ ಭೇಟಿಯಾಗಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರ ಭೇಟಿಗಾಗಿ ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳು ನಾಳೆ ಬೆಳಗ್ಗೆ ಅನುಮತಿ ನೀಡಲಿದ್ದಾರೆ ಎಂದು  ಮಾಹಿತಿ ಲಭ್ಯವಾಗಿದೆ. 


ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಗುರುವಾರ ಸುಮಾರು 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ, ಆದೇಶವನ್ನು ಶನಿವಾರ ಕಾಯ್ದಿರಿಸಿದ್ದರು. ಇತ್ತ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಬಾರದೆಂದು ಇಡಿ ಪರ ವಕೀಲರು ಹೊಸ ಹೊಸ ವಿಷಯಗಳನ್ನು ಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ದರು. ಯಾರೂ ಊಹಿಸದ ದೊಡ್ಡ ದೊಡ್ಡ ಬ್ಯಾಗ್‍ಗಳಲ್ಲಿ ಹೊತ್ತು ತಂದಿದ್ದ ದಾಖಲೆಗಳನ್ನು ಕೋರ್ಟ್ ಮುಂದೆ ಇಟ್ಟು, ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡೋದು ಬೇಡ ಎಂದು ಇಡಿ ಪರ ವಕೀಲರು ವಾದ ಮಂಡಿಸಿದ್ದರು.


ಡಿ ಕೆ ಶಿವಕುಮಾರ್ ತಾಯಿ ಗೌರಮ್ಮ, ಪುತ್ರಿ ಐಶ್ವರ್ಯ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಇದಕ್ಕೆ ಡಿಕೆಶಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಬೇಲ್ ನೀಡಬೇಕು ಎಂದು ಮನವಿ ಮಾಡಿ ಕೊಂಡಿದ್ದರು. ಕೊನೆಗೆ ನ್ಯಾಯಮೂರ್ತಿಗಳು, ಶನಿವಾರ ಆದೇಶವನ್ನು ಕಾಯ್ದಿರಿಸಿದರು. ಆದರೆ ಶನಿವಾರ ಕೋರ್ಟ್ ರಜೆ ಇದ್ದಿದ್ದರಿಂದ ಇಂದು ಆದೇಶ ಹೊರ ಬೀಳಲಿದೆ. ಸೋನಿಯಾ ಗಾಂಧಿ ಭೇಟಿ, ಅಂತಿಮ ತೀರ್ಪು ಪ್ರಕಟ ಕ್ಕಾಗಿ ಎಲ್ಲರು ಕಾದು ಕುಳಿತಿದ್ದಾರೆ. ಬ್ರಹ್ಮಾಂಡ ಸ್ವಾಮೀಜಿಗಳು ಹೇಳಿರುವಂತೆ ಡಿ.ಕೆ.ಶಿಗೆ ನವೆಂಬರ್ ತಿಂಗಳಿಂದ ರಾಜಯೋಗ ಬರುತ್ತಾ ಇಲ್ವಾ ಕಾದು ನೋಡಬೇಕಾಗಿದೆ.




Find out more: