ಹಾಸನ: ಇತ್ತೀಚಿನ ದಿನಮಾನಗಳಲ್ಲಿ ಕಾಂಗ್ರೆಸ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಐಟಿ ಮತ್ತು ಇಡಿ ಇಲಾಖೆಗಳು ದಾಳಿ ನಡೆಸುತ್ತಿದೆ ಎಂಬುದು ಭಾರೀ ಚರ್ಚೆಯಾಗುತ್ತಿರುವ ವಿಷಯ. ಕಾಂಗ್ರೆಸ್ ಮಾತ್ರವಲ್ಲದೇ ಜೆಡಿಎಸ್ ಮೇಲೂ ಐಟಿ ದಾಳಿ ನಡೆಯಲಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಇವರ ಮನೆ ಮೇಲೆ ಐಟಿ ದಾಳಿ ನಡೆದರೆ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗ್ತಾರಂತೆ. ಹೀಗೆ ಹೇಳಿದ್ದು ಯಾರು, ಯಾಕೆ ಹೇಳಿದ್ರು ಗೊತ್ತಾ.
ನನ್ನ ಮನೆಗೆ ಐಟಿಯವರು ಬಂದ್ರೆ ನನ್ನ ಮನೆಯಲ್ಲಿ ಇರುವುದು ಯಡಿಯೂರಪ್ಪ ಅವರ ದಾಖಲೆಗಳೇ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಂಗಳವಾರ ತಿಳಿಸಿದ್ದಾರೆ. ಹಾಸನಾಂಬೆಯ ದರ್ಶನಕ್ಕೆ ಬಂದಿದ್ದ ಅವರು. ನಾನು ಸಿಎಂ ಆಗಿ ಲೂಟಿ ಮಾಡಿಲ್ಲ, ಜನಗಳ ಆಸ್ತಿ ಸಂಪಾದನೆ ಮಾಡಿದ್ದೇನೆ. ದೇವೇಗೌಡರಿಗೆ ರಾಜ್ಯ ಬಿಡಿ ಎಂದು ನಾನೇ ಹೇಳುತ್ತೇನೆ. ಅವರು ಸೋತಿರಬಹುದು, ಆದರೆ ಅವರು ದೇಶದಲ್ಲಿ ಇರಬೇಕು. ಅವರಿಗೆ ಅಧಿಕಾರ ಬೇಡ,ಆದರೆ ಮತ್ತೊಂದು ಕ್ರಾಂತಿಯಾಗಬೇಕು. ಇಲ್ಲವಾದ್ರೆ ದೇಶ ಹಾಳಾಗಲಿದೆ, ಈಗಾಗಲೇ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ನೇತೃತ್ವ ವಹಿಸಿಕೊಳ್ಳದೇ ಇದ್ದರೆ ದೇಶಕ್ಕೆ ಕಷ್ಟಕಾಲ ಬರಲಿದೆ ಎಂದು ತಿಳಿಸಿದ್ದಾರೆ.
ದೇವೇಗೌಡರು ಹಾಸನದಿಂದಲೇ ಲೋಕಸಭಾ ಚುನಾವಣೆಗೆ ನಿಲ್ಲಬೇಕಿತ್ತು. ಲೋಕಸಭೆಯಲ್ಲಿ ಗೌಡರು ಇರಬೇಕಿತ್ತು ಎಂದು ಪಶ್ವತ್ತಾಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾವು ಹೆದರಿ ಕೂರೋದಿಲ್ಲ, ರಾಜ್ಯ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತದ ಬಗ್ಗೆ ದನಿ ಎತ್ತಬೇಕಿದೆ. ಚುನಾವಣಾ ಫಲಿತಾಂಶಕ್ಕೂ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧ ಇಲ್ಲ. ದೇಶದಲ್ಲಿ ಬದಲಾವಣೆಗೆ ಒಂದು ವೇದಿಕೆ ಬೇಕು. ಸತ್ಯಸಂಗತಿಗಳನ್ನು ಧೈರ್ಯವಾಗಿ ಹೇಳಬೇಕಿದೆ ಎಂದರು.
ಉಪಚುನಾವಣೆಯ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 15 ಕ್ಷೇತ್ರಗಳ ಉಪ ಚುನಾವಣೆ ಗಂಭೀರವಾಗಿ ಎದುರಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ. ಎಲ್ಲೆಡೆ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಆತ್ಮವಿಶ್ವಾಸದಿಂದ ಚುನಾವಣೆ ಬಗ್ಗೆ ಮಾತನಾಡಿದರು. ನಾವು ಸೋತ ತಕ್ಷಣ ಸುಮ್ಮನಿರೋದಿಲ್ಲ ಎಂದಿದ್ದು ಉಪ ಚುನಾವಣೆಯ ಜಯಭೇರಿಗಾ ಅಥವಾ ಇನ್ನೇನನ್ನೋ ಮಾಡುತ್ತಾರೋ ಎಂಬುದರಿಂದ ಕಾದು ನೋಡ ಬೇಕಾಗಿದೆ.