ಬೆಂಗಳೂರು: ರಾಜ್ಯಾದ್ಯಂತ ಕಳೆದೆರಡು ತಿಂಗಳುಗಳಿಂದ ಅತಿಯಾದ ಮಳೆ ಮತ್ತು ಹೆಚ್ಚಾದ ಜಲಾಶಯಗಳ ನೀರಿನಿಂದ ಪ್ರವಾಹ ಉಂಟಾಗಿ ಜನ-ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಕೇಂದ್ರ ಸರ್ಕಾರವು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಕೇವಲ 1200ಕೋಟಿಗಳಷ್ಟೇ ತಾತ್ಕಾಲಿಕ ಪರಿಹಾರವೆಂದು ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೇ ವರುಣನ ಆರ್ಭಟ ಶುರುವಾಗಿದೆ. ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಮುಂಗಾರು ಮಳೆ ಸರಿಯಾಗಿ ಆಗದೇ ಮುಗಿಲತ್ತ ಮುಖ ಮಾಡಿ ಕುಳಿತಿದ್ದ ರೈತ ಇದೀಗ ಯಾವಾಗಪ್ಪಾ ಮಳೆ ನಿಲ್ಲುತ್ತದೆ ಎಂದು ಕೂತಿದ್ದಾನೆ. ರಾಜ್ಯ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು ಸಹ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರು ಗಳಿಗೆ ಅಧಿಕಾರವೇ ಮುಖ್ಯವಾಗಿದೆ ಹೊರತು ಜನರಲ್ಲ. ನೆರೆ ಸಂತ್ರಸ್ತರ ಕಣ್ಣೀರು ಹೊರೆಸುವುದಕ್ಕಿಂದ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆ ಗೆಲುವೇ ಮುಖ್ಯವಾಗಿದೆ. ಸಂತ್ರಸ್ತರ ಗೋಳು ಕೇಳಲು ಸಮಯವಿಲ್ಲದ ಸಿಎಂ ಹಾಗೂ ಕಂದಾಯ ಸಚಿವರು ಬುಧವಾರ ಇಡೀ ದಿನ ಪಕ್ಷದ ಚುನಾವಣೆ ಸಿದ್ದತೆ ಸಭೆಯಲ್ಲಿ ಕಾಲ ಕಳೆದಿದ್ದಾರೆ.
ನೆರೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗಿದ್ದ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳು ಅಧಿಕಾರಗಳ ಜೊತೆಗೆ ವಿಡಿಯೋ ಸಂವಾದ ಮೂಲಕ ಮಾತನಾಡಿ, ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭವಾದ ಹಿನ್ನೆಲೆ ಎರಡನೇ ಭಾರಿ ಪ್ರವಾಹದ ಭೀತಿ ಉಂಟಾಗಿದೆ. ನಿರಂತರವಾಗಿ ಸುರಿದ ಮಹಾ ಮಳೆಯಿಂದ ರಾಜ್ಯದ 17 ಜಿಲ್ಲೆಗಳಿಗೆ ಅಪಾರವಾದ ಹಾನಿಯಾಗಿದೆ.
ಇಂತಹ ಸಂದರ್ಭದಲ್ಲಿ ನೆರೆಪೀಡಿತ ಜಿಲ್ಲೆಗಳ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಜವಾಬ್ದಾರಿ ಮರೆತಂತೆ ಕಾಣುತ್ತಿದೆ. ಡಿಸೆಂಬರ್ 5ಕ್ಕೆ ಉಪಚುನಾವಣೆ ಹಿನ್ನೆಲೆ ಬಿಜೆಪಿ ಇಂದು ದಕ್ಷಿಣ ಕರ್ನಾಟಕದ 8 ಕ್ಷೇತ್ರಗಳ ಉಪಚುನಾವಣೆ ಸಿದ್ದತೆ ಕುರಿತು ಸಭೆ ನಡೆಸಿದೆ. ಆದರೆ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸುತ್ತಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಏಕಾಏಕಿ ವಿಡಿಯೋ ಸಂವಾದ ಬಿಟ್ಟು ಪಕ್ಷದ ಕಚೇರಿಯಲ್ಲಿ ನಡೆದ ಉಪಚುನಾವಣೆ ಸಿದ್ದತೆ ಸಭೆಯಲ್ಲಿ ಭಾಗವಹಿಸಿದ್ದು ಟೀಕೆಗೆ ಗುರಿಯಾಗಿದೆ.ಜಿಲ್ಲಾಧಿಕಾರಿಗಳ ಜೊತೆಗಿನ ವಿಡಿಯೋ ಸಂವಾದವನ್ನು ಕೇವಲ 10 ನಿಮಿಷಕ್ಕೆ ಸಿಮೀತಗೊಳಿಸಿದ ಸಿಎಂ ನಡೆ ಬೇಸರತರಿಸಿದೆ.