ಮಡಿಕೇರಿ: ಇತ್ತೀಚೆಗೆ ಎಚ್. ವಿಶ್ವನಾಥ್ ಮತ್ತು ಸಾರಾ ಮಹೇಶ್ ಅವರ ಆಣೆ ಪ್ರಮಾಣ ವಿಚಾರ ತಾರಕಕ್ಕೇರಿತ್ತು. ಇದೀಗ ಮತ್ತೆ ಬಿಜೆಪಿಯಿಂದ ಅನರ್ಹರಿಗೆ ಟಿಕೆಟ್ ಸಿಗುತ್ತಾ ಇಲ್ವಾ ಎನ್ನುವ ಗೊಂದಲಗಳು ಅನುಮಾನಗಳು ಶುರುವಾಗಿವೆ. ಆದರೆ ವಿಶ್ವನಾಥ್ ಮಾತ್ರ ಅನರ್ಹ ರಿಗೆ ಟಿಕೆಟ್ ಫಿಕ್ಸ್ ಎಂದಿದ್ದಾರೆ. ಅನರ್ಹ ಶಾಸಕರಿಂದ ತಾನೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರೋದು. ಹೀಗಾಗಿ ಎಲ್ಲರಿಗೂ ಉಪಚುನಾವಣೆಗೆ ಟಿಕೆಟ್ ಕೊಡಲೇಬೇಕು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ಭಾನುವಾರ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳಗೋಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ನಮ್ಮ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆ ತೀರ್ಪಿನ ಮೇಲೆಯೇ ಎಲ್ಲವೂ ನಿಂತಿದೆ ಎಂದರು. ಇದೇ ವೇಳೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಕೊಡುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾವು 17 ಶಾಸಕರು ತಾನೇ ಬಿಜೆಪಿ ಸರ್ಕಾರ ಮಾಡಿರೋದು. ಹೀಗಾಗಿ ನಮ್ಮೆಲ್ಲರಿಗೂ ಟಿಕೆಟ್ ಕೊಡಲೇಬೇಕು ಎಂದು ಕಡ್ಡಿ ಮುರಿದ ಹಾಗೆ ಹೇಳಿಕೆ ಕೊಟ್ಟರು.
ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ. ಹಿಂದೆ ಜನರು ಮತಕೊಟ್ಟು ಗೆಲ್ಲಿಸಿದ್ದಾರೆ. ಆದರೆ ನಾನು ಗೆದ್ದು ರಾಜೀನಾಮೆ ನೀಡಿದ್ದೇನೆ. ಈಗಲೂ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. ಆದ್ದರಿಂದ ಪುನಃ ಚುನಾವಣೆಗೆ ನಿಲ್ಲುತ್ತೇನೆ ಎಂದು ಹುಣಸೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ಎಂಬುದನ್ನು ಸ್ಪಷ್ಟಪಡಿಸಿದರು. ಡಿಕೆ ಶಿವಕುಮಾರ್ ಅವರ ಅದ್ದೂರಿ ಸ್ವಾಗತ ವಿಚಾರವಾಗಿ ಮಾತನಾಡಿ, ಜನರು ವಿಶ್ವಾಸದಿಂದ ಅವರ ನಾಯಕನನ್ನು ಸ್ವಾಗತಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆಯವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದವರು. ಅವರ ದೃಷ್ಟಿಕೋನದಲ್ಲಿ ಡಿಕೆಶಿಯವರ ಸ್ವಾಗತವನ್ನು ವಿರೋಧಿಸಿದ್ದಾರೆ.
ಆದರೆ ಅದು ಸಮಂಜಸವಲ್ಲ ಎಂದು ವಿಶ್ವನಾಥ್ ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು. ಜೊತೆಗೆ ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರಾಗಲಿ, ಮತದಾರರಾಗಲಿ ಒಂದು ಪಕ್ಷವನ್ನು ಬೆಳೆಸಬೇಕು. ಅವರ ಹೊರತಾಗಿ ಬೇರೆಯವರಿಂದ ಪಕ್ಷ ನಾಶವಾಗಲ್ಲ ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.