ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿ 17 ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಕೊನೆಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಮತ್ತೇ ಇದೀಗ ಉಪಚುನಾವಣೆ ಎದುರಾಗಿದ್ದು ಸೋಲು ಗೆಲುವಿನ ಲೆಕ್ಕಾಚಾರಗಳು ಪ್ರಾರಂಭವಾಗಿದೆ. ಉಪ ಚುನಾವಣೆಗೆ ಮೂರು ಪಕ್ಷಗಳು ಭರದ ಸಿದ್ದತೆ ನಡೆಸಿವೆ. ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ರಿಸಲ್ಟ್ ಮತ್ತು ಬಹುತೇಕ ಪಕ್ಷಾಂತರಿಗಳ ಸೋಲಾಗಿದೆ. ರಾಜ್ಯ ಬಿಜೆಪಿಗೆ ಚುರುಕು ಮುಟ್ಟಿಸಿದೆ. ಇದರಿಂದ ಎಚ್ಚೆತ್ತಿರುವ ಕಮಲ ಪಾಳಯ ಹುಬ್ಬಳ್ಳಿಯಲ್ಲಿಂದು ಸಭೆ ನಡೆಸಿ, ಗೆಲುವಿನ ರಣತಂತ್ರಗಳ ಕುರಿತು ಚರ್ಚೆ ನಡೆಸಿದೆ.
ಉತ್ತರ ಕರ್ನಾಟಕದ ಕಾಗವಾಡ, ಗೋಕಾಕ್, ಅಥಣಿ, ಹಿರೇಕೆರೂರು, ರಾಣೇಬೆನ್ನೂರು, ಹೊಸಪೇಟೆ ಹಾಗೂ ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅನರ್ಹರಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದರೆ ಅವರೇ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ನಾಯಕರು ಸಭೆಗೆ ತಿಳಿಸಿದರು. ಇದಕ್ಕೆ ರಾಣೇಬೆನ್ನೂರಿನ ಡಾ.ಬಸವರಾಜ್ ಹಾಗೂ ಯು.ಬಿ.ಬಣಕಾರ್ ಮೊದಲು ಆಕ್ಷೇಪ ಎತ್ತಿದರೂ ನಂತರ ಉನ್ನತ ಹುದ್ದೆಯ ಭರವಸೆ ಮೇರೆಗೆ ಸುಮ್ಮನಾದರು. ಮೊದಲಿಗೆ ಹಾವೇರಿ ನಾಯಕರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವಂತೆ ಮುಖಂಡರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಸಭೆ ಮುಗಿಸಿ ಹೊರಬಂದ ಬಸವರಾಜ್ ಹಾಗೂ ಬಣಕಾರ್, ಅನರ್ಹರರು ಬಿಜೆಪಿ ಸೇರಿದ ಮೇಲೆ ನೋಡೋಣ ಅಂತ ಅಡ್ಡಗೋಡೆ ಮೇಲೆ ದೀಪವಿಟ್ಟರು. ಅಲ್ಲದೆ, ಕೆಲ ಟಿಕೆಟ್ ಆಕಾಂಕ್ಷಿಗಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಗೆ ಎಲ್ಲಾ 7 ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ಆಹ್ವಾನ ನೀಡಿದ್ದರೂ ಬಳ್ಳಾರಿ ಹಾಗೂ ಬೆಳಗಾವಿ ನಾಯಕರು ಗೈರಾಗುವ ಮೂಲಕ ವರಿಷ್ಠರಿಗೆ ಶಾಕ್ ನೀಡಿದ್ದಾರೆ. ಕಾಗವಾಡ ಪರಾಜಿತ ಅಭ್ಯರ್ಥಿ ರಾಜುಕಾಗೆ, ಗೋಕಾಕ್ ಪರಾಜಿತ ಅಭ್ಯರ್ಥಿ ಅಶೋಕ್ ಪೂಜಾರಿ ಸೇರಿದಂತೆ ಬಹುತೇಕರು ಗೈರಾಗೋ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಬಳ್ಳಾರಿ ನಾಯಕರು ರಾಜೀನಾಮೆ ಪತ್ರ ಹಿಡಿದು ವರಿಷ್ಠರ ಮುಂದೆ ಕೂತ ಪ್ರಸಂಗವೂ ನಡೆಯಿತು.