ಬೆಂಗಳೂರು: ಇ. ಡಿ ಸಮನ್ಸ್ ರದ್ದು ಕುರಿತು ಮಾಜಿ ಸಚಿವ ಡಿಕೆ ಶಿವಕುಮಾರ್ ತಾಯಿ ಮತ್ತು ಹೆಂಡತಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ರಮ ಹಣ ಪ್ರಕರಣ ಕುರಿತಾದ ಈ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 4ಕ್ಕೆ ಮುಂದೂಡಿತ್ತು. ಇಂದುಈ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ ನವೆಂಬರ್​ 8 ಕ್ಕೆ ಮೂಂದೂಡಿದೆ. ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ವಾದ-ಪ್ರತಿವಾದ ಆಲಿಸಲಿದೆ. ಈಗಾಗಲೇ ಹೈಕೋರ್ಟ್​ ನಾಲ್ಕು ಬಾರಿ ಅರ್ಜಿ ವಿಚಾರಣೆ ಮುಂದೂಡಿದೆ. 


ಇತ್ತೀಚೆಗೆ ಡಿಕೆಶಿ ತಾಯಿ ಮತ್ತು ಪತ್ನಿ ತಮಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ತಾಯಿ ಪರವಾಗಿ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್, ಗೌರಮ್ಮಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್​​ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ ಎಂದಿದ್ದರು. ಜತೆಗೆ ಅನಾರೋಗ್ಯದ ಕಾರಣ ಡಿಕೆಶಿ ತಾಯಿ ಮತ್ತು ಪತ್ನಿ ಇಬ್ಬರ ವಿಚಾರಣೆಯೂ ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು. ಕಳೆದ ಅ.21 ರಂದು ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ, ಇಬ್ಬರಿಗೂ ಹೊಸ ಸಮನ್ಸ್​ ನೀಡುವಂತೆ ಸೂಚಿಸಿತ್ತು. ಈ ವೇಳೆ ಇಡಿ ಪರವಾಗಿ ಹಾಜರಿದ್ದ ವಕೀಲರು ಕಾಂಗ್ರೆಸ್​​ ಟ್ರಬಲ್​​ ಶೂಟರ್​​ ಡಿ.ಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದು ತಿಳಿಸಿದ್ದರು.


ಈ ಹಿಂದೆ ಅ.16ರಂದು ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್, ಡಿಕೆಶಿ ತಾಯಿ ಹಾಗೂ ಪತ್ನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಉಷಾ ಅವರು ವಿಚಾರಣೆಗೆ ಹಾಜರಾಗಬೇಕಿಲ್ಲ. ಅಲ್ಲದೇ ಗೌರಮ್ಮಗೆ ನೀಡಿದ್ದ ಸಮನ್ಸ್ ಕೂಡ ಹಿಂಪಡೆಯಲಾಗಿದೆ. ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದರು. ಇದೀಗ ಅರ್ಜಿ ವಿಚಾರಣೆ ಮತ್ತೇ ಮುಂದೂಡಲಾಗಿತ್ತು ಪ್ರಕರಣಕ್ಕೆ ಯಾವಾಗ ತೆರೆ ಬೀಳುತ್ತದೆಯೋ ಎಂಬಂತಾಗಿದೆ.


Find out more: