ಕೊಚ್ಚಿ: ಸಮಾನತೆಯ ಪ್ರಶ್ನೆಯೊಂದಕ್ಕೆ ಸಾಕ್ಷಿಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಶಬರಿಮಲೆ ವಿವಾದ ಹೊಳೆಯಂತೆ ಹರಿಯುತ್ತಲೇ ಇದೆ. ಇದೀಗ ಪ್ರಕರಣವನ್ನು ಮತ್ತೆ ವಿಸ್ಕೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. 7 ಸದಸ್ಯರ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ಈ ಹಿಂದಿನ ತೀರ್ಪಿಗೆ ತಡೆ ಇಲ್ಲ, ಮಹಿಳೆಯರ ದೇಗುಲ ಪ್ರವೇಶಕ್ಕೆ ಅಡ್ಡಿ ಇಲ್ಲ ಎಂದು ಗುರುವಾರದ ತೀರ್ಪಿನಲ್ಲಿ ಹೇಳಲಾಗಿದೆ.
ದೇವರ ನಾಡು ಕೇರಳದ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ 2018ರ ಸೆ.28ರಂದು ನೀಡಿದ್ದ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮತ್ತೆ ವಿಸ್ಕೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ, ಈಗಾಗಲೇ ನೀಡಿದ ತೀರ್ಪಿನಂತೆ ಎಲ್ಲಾ ವಯೋಮಾನದ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಮತ್ತೆ ಏಳು ಸದಸ್ಯರ ಪೀಠ ತೀರ್ಪು ನೀಡುವ ತನಕ ಇದೇ ತೀರ್ಪು ಮಾನ್ಯ ಪಡೆಯಲಿದೆ ಎಂದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯಿ ಅವರ ನೇತೃತ್ವದ ಪೀಠ 'ಮಹಿಳೆಯರಿಗೆ ನಿರ್ಬಂಧ ಹೇರಿದ್ದು ಕೇವಲ ಶಬರಿಮಲೆ ದೇಗುಲದಲ್ಲಿ ಮಾತ್ರವಲ್ಲ. ಇದು ಇತರೆ ಹಲವು ದೇವಸ್ಥಾನಗಳಲ್ಲಿ ಹಾಗೂ ಮಸೀದಿಗಳಲ್ಲಿಯೂ ಇದೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಪೀಠದ ಉಳಿದ ಸದಸ್ಯರಾದ ನ್ಯಾ.ರೋಹಿಂಟನ್ ಫಾಲಿ ನರಿಮನ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ. ಇದರಿಂದ ಅರ್ಜಿಯ ವಿಚಾರಣೆಯನ್ನು ವಿಸ್ಕೃತ ಪೀಠಕ್ಕೆ ವರ್ಗಾಯಿಸಲಾಗಿದೆ.
ಪ್ರಕರಣದ ಹಿನ್ನಲೆ ತಿಳಿಯಿರಿ:-
ಶಬರಿಮಲೆ ದೇಗುಲಕ್ಕೆ 10-50ರ ವಯೋಮಾನದ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದ ಸುಪ್ರೀಂಕೋರ್ಟ್‌ನ 5 ಸದಸ್ಯರ ನ್ಯಾಯಪೀಠ 2018ರ ಸೆ.28ರಂದು 4-1ರ ಬಹುಮತದಲ್ಲಿ ನೀಡಿದ್ದ ತೀರ್ಪಿನಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಈ ರೀತಿಯ ಮಹಿಳೆಯರಿಗೆ ಅವರ ವಯಸ್ಸಿಗನುಗುಣವಾಗಿ ನಿರ್ಬಂಧ ಹೇರಿಕೆ ಅಕ್ರಮ ಮತ್ತು ಅಸಾಂವಿಧಾನಿಕ ಎಂದಿತ್ತು.ಈ ತೀರ್ಪು ಸಂಪ್ರದಾಯವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಕೇರಳದಲ್ಲಿ ಭಾರೀ ಹಿಂಸಾಚಾರ ಕೂಡಾ ಸಂಭವಿಸಿತ್ತು. ಈ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಸುಪ್ರೀಂಕೋರ್ಟ್‌ಗೆ 56 ಅರ್ಜಿಗಳು, 4 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು.