ರಾಜ್ಯ ರಾಜಕೀಯದಲ್ಲಿ ಉಪ ಚುನಾವಣಾ ಕಾವು ರಂಗೇರುತ್ತಿದ್ದು, ಪ್ರಚಾರದಲ್ಲಿ ಅಭ್ಯರ್ಥಿಗಳು ಫುಲ್ ಬ್ಯೂಸಿಯಾಗಿದ್ದಾರೆ. ಆದರೆ ಟಗರು ಇದೀಗ ಅನರ್ಹರ ಕುರಿತು ಅನರ್ಹರು ಸೋಲುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಗುಡುಗಿದೆ. ಯಾರಿದು, ಏನಿದು ಸ್ಟೋರಿ ಅಂತ ನಾವ್ ಹೇಳ್ತೀವಿ ನೋಡಿ.
ಅನರ್ಹರ ಸೋಲಿಸುವುದೇ ನಮ್ಮ ಗುರಿ, ಅವರು ಸೋಲುವುದು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಮಂಕಿ ಬಾತ್ ನಿಂದ ಹೊಟ್ಟೆ ತುಂಬಲ್ಲ ಸಾಹೆಬ್ರೆ ಎಂದು ಗುಡುಗಿದ್ದಾರೆ. ನಾನು ಸಾಮಾಜಿಕ ನ್ಯಾಯದ ಪರ ಇರುವುದರಿಂದಲೇ ಬಿಜೆಪಿ, ಜೆಡಿಎಸ್ ಮತ್ತು ಈಗಿನ ಎಲ್ಲ ಅನರ್ಹ ಶಾಸಕರೂ ನನ್ನನ್ನು ಬೈಯ್ಯುತ್ತಿದ್ದಾರೆ. ಅವರು ಏನು ಬೇಕಾದರೂ ಬೈದುಕೊಳ್ಳಲಿ, ಈ ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಭೋವಿ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್ಸಿ, ಎಸ್ಟಿಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ 24.1ರಂತೆ ಎಸ್‌ಸಿಪಿ- ಟಿಎಸ್‌ಪಿ ಯೋಜನೆಗೆ ಹಣ ಮೀಸಲಿಟ್ಟೆ. ಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ಜಾರಿಗೆ ತಂದೆ. ಬಡ್ತಿ ಮೀಸಲಾತಿ ಮುಖಾಂತರ ನ್ಯಾಯ ಒದಗಿಸಿದೆ.
ಆದರೆ, ಮೈತ್ರಿ ಸರ್ಕಾರದ ಕುಮಾರಸ್ವಾಮಿಯಾಗಲೀ ಹಾಗೂ ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರವಾಗಲೀ ಗುತ್ತಿಗೆ ಮೀಸಲು ಪದ್ಧತಿಯನ್ನು ಜಾರಿಗೊಳಿಸಿಲ್ಲ. ಇದನ್ನೆಲ್ಲ ಕೇಳುವವರು ಯಾರು. ವಿಧಾನಸಭೆಯಲ್ಲಿ ಯಾರು ಕೇಳುತ್ತಾರೋ ಅಂತವರನ್ನು ನೀವು ಬೆಂಬಲಿಸಬೇಕಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರು. ಉಪ ಚುನಾವಣೆಗೆ ಸ್ಪರ್ಧಿಸಿರುವ ಅನರ್ಹರೆಲ್ಲರೂ ವಿಚಲಿತರಾಗಿದ್ದಾರೆ. ಪರಿಣಾಮ ಏನೇನೋ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗ್ತೀವಿ.ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದೆಲ್ಲ ಅನರ್ಹರು ಭರವಸೆ ನೀಡುತ್ತಿದ್ದಾರೆ. ಆದರೆ, ಜನ ಇವರ ಮಾತಿಗೆ ಮರುಳಾಗುವುದಿಲ್ಲ ಎಂದುತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲಿ, ಬೇಡ ಅನ್ನಲ್ಲ. ಆದರೆ ಮಂದಿರ, ಮನ್ ಕೀ ಬಾತ್‌ನಿಂದಲೇ ಹೊಟ್ಟೆತುಂಬುವುದಿಲ್ಲ. ಜನಪರ ಸರ್ಕಾರಗಳು ಸಾರ್ವಜನಿಕರ ಹೊಟ್ಟೆ,ಬಟ್ಟೆ, ಸೂರು ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಕೇವಲ ಮಂದಿರಗಳಿಂದ ಏನು ಪ್ರಯೋಜನವಿಲ್ಲ ಎಂದರು.