ಬೆಂಗಳೂರು: ದಿನ ಕಳೆದಂತೆ ಕುತೂಹಲ ಹುಟ್ಟಿಸುತ್ತಿರುವ ಉಪ ಚುನಾವಣೆ ಕದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಬಿಜೆಪಿಯೂ  ಎಲ್ಲಾ ಸೇರಿಕೊಂಡು ಸರ್ಕಾರ ಉಳಿಸಿಕೊಳ್ಳಲೇ  ಬೇಕು ಹೋರಾಡುತ್ತಿದೆ. ಪ್ರಸ್ತುತ ಎರಡು ಪಕ್ಷದ ಅಭ್ಯರ್ಥಿಗಳು ನಾಯಕರು ಚುನಾವಣೆ ಪ್ರಚಾರದಲ್ಲಿ ಭರವಸೆಗಳು ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
 
ರಾಜ್ಯದ ಹಿರಿಯ ಕಾಂಗ್ರೆಸಿಗರ ಮುನಿಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿದ್ದರಾಮಯ್ಯ ಪ್ರಚಾರದ ಅಖಾಡದಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿ ನಾಯಕರು ಮತ್ತು ಆ ಪಕ್ಷದ ಅಭ್ಯರ್ಥಿಗಳಾಗಿರುವ ಅನರ್ಹರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎಂಬಂತೆ ಬಿಜೆಪಿ ನಾಯಕರೂ ಅದೇ ಧಾಟಿಯಲ್ಲಿ ಮಾರುತ್ತರ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು 'ಏಕಾಂಗಿ' ಎಂದು ಬಿಜೆಪಿ ವ್ಯಂಗ್ಯವಾಡಿದೆ. 
 
ರಾಜ್ಯ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆ ಮುಗಿಬೀಳುತ್ತಿರುವುದನ್ನು ನೋಡಿದರೆ, ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಬಹುಮಾನ ಕೊಡುತ್ತೇನೆ ಎಂದು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಭರವಸೆ ನೀಡಿರಬಹುದು,'' ಎಂದು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಮಾತಿಗೆ ಕೆ.ಎಸ್‌.ಈಶ್ವರಪ್ಪ ಮಾರುತ್ತರ ನೀಡಿ ''ಸಿದ್ದರಾಮಯ್ಯನವರೇ, ನಿಮ್ಮ ದುರಹಂಕಾರವನ್ನು ವಿರೋಧಿಸಿದರೆ ಟಾರ್ಗೆಟ್‌ ಅಂತಿರಾ.., ನಿಮ್ಮ ನಡೆಯನ್ನು ವಿರೋಧಿಧಿಸಿದರೆ ಭಯ ಅಂತೀರಾ.
 
ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ. ನಿಮಗೂ ಬಿಜೆಪಿಯೆಂದರೆ ಭಯಾನಾ? ಅಥವಾ ನೀವು ಏಕವಚನದಲ್ಲಿ ಟೀಕಿಸಿದರೆ ನಿಮ್ಮ ಹೈಕಮಾಂಡ್‌ 'ಭಾರತ ರತ್ನ'ಕ್ಕೆ ಶಿಫಾರಸು ಮಾಡುತ್ತದಾ ಎಂದು ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
 
ಶುಕ್ರವಾರ ಯಶವಂತಪುರ ಹಾಗೂ ಮಹಾಲಕ್ಷ್ಮಿಲೇಔಟ್‌ ವಿಧಾನಸಭಾ ಕ್ಷೇತ್ರ ಪ್ರಚಾರ ಸಭೆಗಳಲ್ಲಿ ಅನರ್ಹ ಶಾಸಕರ ವಿರುದ್ಧ ಸಿದ್ದರಾಮಯ್ಯ ಅವರು ವಾಚಮಗೋಚರ ಭಾಷಣ ಮಾಡುತ್ತಿದ್ದರೆ, ಬಿಜೆಪಿ ಪ್ರಚಾರ ಸಭೆಗಳಲ್ಲಿ ಅದಕ್ಕೆ ಪ್ರತ್ಯುತ್ತರ ನೀಡುವ ಕೆಲಸವನ್ನು ಸಚಿವ ಆರ್‌.ಅಶೋಕ್‌ ಮಾಡಿದ್ದಾರೆ. ''ಅನರ್ಹರು ಪಕ್ಷಾಂತರಿಗಳು, ದ್ರೋಹಿಗಳು ಎನ್ನುವ ನೀವು ಪಕ್ಷಾಂತರಿ ಅಲ್ಲವೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ''ಮೋದಿ, ಅಮಿತ್‌ ಶಾ ಅವರಂತಹ ದೊಡ್ಡವರ ಹೆಸರು ಬಿಟ್ಟು ಸತ್ಯ ಮಾತಾಡಿ ಎಂದಿದ್ದಾರೆ. 

Find out more: