ಬೆಳಗಾವಿ: ಸಮ್ಮಿಶ್ರ ಸರ್ಕಾರ ಉರುಳಲು  ಅತೀ ಪ್ರಮುಖ ಕಾರಣೀಕರ್ತರಾದ ರಮೇಶ್  ಜಾರಕಿಹೊಳಿ ಅವರನ್ನು ಸೋಲೀಸೇ ಸೋಲಿಸುತ್ತೇನೆ. ನಮ್ಮ ಹೋರಾಟ ಏನಿದ್ದರೂ ರಮೇಶ್ ವಿರುದ್ಧ ಭಾರತೀಯ ಜನತಾ ಪಕ್ಷದ ವಿರುದ್ಧ ಅಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಗುಡುಗಿದ್ದಾರೆ. 
 
ಶನಿವಾರ ಗೋಕಾಕ್‍ನಲ್ಲಿ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹಾಗೂ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಕೈ ಕೆಳಗಿನ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ, ಬೀಟ್ ಪೊಲೀಸರು ಪಿಎಸ್‍ಐ ನನ್ನು ಭೇಟಿಯಾಗಲು ಬಿಡುವುದಿಲ್ಲ. ಹಾಗೇ ಇವರೂ ಸಹ ಜನರು ಶಾಸಕರನ್ನು ಭೇಟಿಯಾಗಲು ಬಿಡುವುದಿಲ್ಲ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಆದರೆ ಇವರು ಐದು ಊರುಗಳಲ್ಲಷ್ಟೇ ಜಾಸ್ತಿ ಇದ್ದಾರೆ, ಉಳಿದ ಊರುಗಳಲ್ಲಿ ಅವರನ್ನು ಮುಗಿಸಿದ್ದೇವೆ. ಸರ್ಕಾರ ಬಿಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ಅವರ ಬಳಿ ಇಲ್ಲ ಎಂದು ಹರಿಹಾಯ್ದರು.
 
ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ,ಕುಡಿಯಲು ನೀರು ಇಲ್ಲ. ಯಾವುದೇ ವ್ಯಾಪಾರವಿಲ್ಲ, ಸಮಾಜಸೇವೆ ಇಲ್ಲ ಆದರೂ ಇವರು ಅಷ್ಟು ಬ್ಯುಸಿ ಇರುತ್ತಾರೆ. ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಲೂಟಿ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇಲ್ಲಿ, ಅರ್ಧಪಾಲು ಅವರಿಗೆ ಎಂಬಪದ್ಧತಿ ಇದೆ. ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ. ರಮೇಶ್ ಜಾರಕಿಹೊಳಿಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದರು ಈಗೇನು ಮಾಡುತ್ತಿದ್ದಾರೆ ಎಂದರು.
 
ರಮೇಶ ಜಾರಕಿಹೊಳಿ ಸೋಲಿಸುವುದೇ ನಮ್ಮ ಗುರಿ. ಅವರು ಗೆದ್ದರೆ ಮೂರು ಲಾಭ ಆಗುತ್ತೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿಸಚಿವರು ಆಗುತ್ತಾರೆಎಂದು ಅಂತಾ ಪ್ರಚಾರ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರಾದರೆ ಯಾರಿಗೆ ಲಾಭ, ಮತ್ತೆ ಅವರಿಗೇ ಲಾಭ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಏನು ಅಭಿವೃದ್ಧಿ ಮಾಡಿದ್ದಾರೆ? ಜನ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
 
 
 

Find out more: