ಮುಂಬೈ: ರಾಷ್ಟ್ರ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆ ಯಾಗಿದ್ದು, ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಕೊನೆಗೂ ಸರ್ಕಾರ ರಚಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪದಗ್ರಹಣ ಮಾಡಿದ್ದಾರೆ. ಈ ಹಠಾತ್ ರಾಜಕೀಯ ಬೆಳವಣಿಗೆ ಬಗ್ಗೆ ಕೆಂಡಾಮಂಡಲ ವಾಗಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇದು ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂದು ಆರೋಪಿಸಿದ್ದಾರೆ.
 
ಮುಂದುವರೆದು, ಶಿವಸೇನೆ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ ಬಿಜೆಪಿಯ ಕ್ರಮ ಸಂವಿಧಾನ ವಿರೋಧವಾದುದು ಎಂದು ಕಿಡಿಕಾರಿದರು. ನಾವು (ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ) ಈಗಲೂ ಒಗ್ಗಟ್ಟಾಗಿದ್ದೇವೆ. ಆದರೆ ಬಿಜೆಪಿ ಅಧಿಕಾರ ಲಾಲಸೆಗಾಗಿ ವಾಮ ಮಾರ್ಗ ಅನುಸರಿಸುವ ಮೂಲಕ ಪ್ರಜಾಪ್ರಭುತ್ವದ ನೀತಿ ನಿಯಮಗಳು ಗಾಳಿಗೆ ತೂರಿದೆ ಎಂದು ವಾಗ್ದಾಳಿ ನಡೆಸಿದರು.
 
ಪದೇ ಪದೇ ಬೆನ್ನಿಗೆ ಚೂರಿ ಹಾಕುವ ಬಿಜೆಪಿ ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದೆ. ಇದಕ್ಕೆ ಇಂದು ಬೆಳಗ್ಗೆ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ ಎಂದು ಶಿವಸೇನೆ ಮುಖ್ಯಸ್ಥರು ಆರೋಪಿಸಿದರು. ಮಹಾರಾಷ್ಟ್ರ ಜನಕ್ಕೆ ದ್ರೋಹ ಬಗೆದಿರುವ ಬಿಜೆಪಿಯನ್ನು ಮತದಾರರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಶಿವಸೇನೆ ಮತ್ತು ಎನ್‍ಸಿಪಿಯ ನಾಯಕರು ಮತ್ತು ಕೆಲವು ಶಾಸಕರು ಹಾಜರಿದ್ದರು. ಆದರೆ ಕಾಂಗ್ರೆಸ್‍ನ ಪ್ರಮುಖ ನಾಯಕರ ಗೈರು ಹಾಜರಿ ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು.
 
 
ಒಟ್ಟಿನಲ್ಲಿ, ಶಿವಸೇನೆ ನೇತೃತ್ವದ ಸರಕಾರ ರಚನೆ ವಿಚಾರವಾಗಿ ಎಲ್ಲ ಬೆಳವಣಿಗೆಗಳನ್ನು ಸೈಲೆಂಟಾಗೇ ಗಮನಿಸುತ್ತಿದ್ದ ಬಿಜೆಪಿ ಹಾಗೂ ದೇವೇಂದ್ರ ಫಡ್ನವಿಸ್‌ ಬೆಳಗ್ಗೆ ಆಗುವಷ್ಟರಲ್ಲಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಅಧಿಕಾರ ರಚನೆ ವಿಚಾರದಲ್ಲಿ ಸುಮ್ಮನೆ ಕುಳಿತಿದೆ ಎಂಬ ಮಾತುಗಳಿಗೆ ತಿಲಾಂಜಲಿ ಬಿದ್ದಿದ್ದು, ತೆರೆಮರೆಯಲ್ಲೇ ಕಸರತ್ತು ಮಾಡಿ ಸರಕಾರ ರಚಿಸಿಯೇ ಬಿಟ್ಟಿದೆ.  ಈ ಬೆಳವಣಿಗೆ ಯನ್ನು ಸಹಿಸದ ಎನ್. ಸಿ. ಪಿ ಮತ್ತು ಠಾಕ್ರೆ ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

Find out more: