ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ ಉಪ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಪರಸ್ಪರ ಭರವಸೆಗಳ ಮಹಾಪೂರ, ಪರಸ್ಪರ ಒಬ್ಬರಿಗೊಬ್ಬರ ಆಣೆ ಪ್ರಮಾಣಗಳು ಟೀಕೆಗಳಲ್ಲಿ ಮೂರು ಪಕ್ಷಗಳು ಫುಲ್ ಬ್ಯೂಸಿಯಾಗಿದ್ದು, ಸಚಿವ ಸಿಟಿ ರವಿ ಅವರು ಉಪ ಚುನಾವಣೆ ಬಗ್ಗೆ ಮಾತನಾಡಿದ್ದಾರೆ.
 
ಈಗ ನಡೆಯುತ್ತಿರುವ ಉಪಚುನಾವಣೆ ಫ‌ಲಿತಾಂಶದ ಬಳಿಕ ಅವಕಾಶವಾದಿ ಕೂಟ ಕಟ್ಟಿಕೊಳ್ಳುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ಸುಭದ್ರವಾಗಿರಲಿದ್ದು, ಮಧ್ಯಾಂತರ ಚುನಾವಣೆ ನಡೆಯುವ ಸಾಧ್ಯತೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. 
 
ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಪರಸ್ಪರ ಆರೋಪ- ಪ್ರತ್ಯಾರೋಪ, ರಿಮೋಟ್‌ ಕಂಟ್ರೋಲ್‌ ಆಡಳಿತ, ಎಚ್‌.ಡಿ.ರೇವಣ್ಣ ಹಸ್ತಕ್ಷೇಪದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರಕಾರ ಪತನಗೊಂಡಿತು. ಸ್ವತಃ ಎಚ್‌.ಡಿ.ಕುಮಾರಸ್ವಾಮಿ ಅವರೇ ಕಾಂಗ್ರೆಸ್‌ನವರು ತಮ್ಮನ್ನು ಗುಲಾಮರಂತೆ ನಡೆಸಿಕೊಂಡಿದ್ದು, ಅದರಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಿದ್ದರು. ಹಾಗಾಗಿದ್ದರೂ ಉಪಚುನಾವಣೆ ಬಳಿಕ ಮತ್ತೆ ಅವಕಾಶವಾದಿ ಕೂಟ ಕಟ್ಟಿಕೊಳ್ಳುವ ಹಗಲುಗನಸು ಕಾಣಲಾರಂಭಿಸಿದ್ದಾರೆ ಎಂದು ಗುಡುಗಿದ್ದಾರೆ. ಸಿಕ್ಕಾಪಟ್ಟೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. 
 
ಸಿನೆಮಾ ನಟರಿಗೆ ನಟನೆ ಒಂದು ವೃತ್ತಿಯಾಗಿದ್ದರೂ ಗ್ಲಿಸರಿನ್‌ ಇಲ್ಲದೆ ಅಳಲು ಸಾಧ್ಯವಾಗುವುದಿಲ್ಲ. ಆದರೆ ನಟ ಭಯಂಕರರಿಗೆ ಗ್ಲಿಸರಿನ್‌ ಇಲ್ಲದೆ ಕಣ್ಣೀರು ಬರುತ್ತದೆ. ತಮ್ಮದೇ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿದ್ದ ಶಾಸಕನನ್ನು “ಬಾಂಬೆ ಕಳ್ಳ’ ಎನ್ನುತ್ತಾರೆ. ಅವರ ಪಕ್ಷದಲ್ಲಿದ್ದರೆ ಆತ ಸಂಪನ್ನ, ಪಕ್ಷ ಬಿಟ್ಟರೆ ಕಳ್ಳ. ತಮ್ಮ ಪಕ್ಷದಲ್ಲಿದ್ದರೆ ಸಚ್ಚಾರಿತ್ರ್ಯವಂತ, ಪಕ್ಷ ಬಿಟ್ಟರೆ ಪರಮ ಭ್ರಷ್ಟ ಎಂಬ ಧೋರಣೆ ಎಷ್ಟು ಸರಿ ಎಂದು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. 
 
ಪಕ್ಷಾಂತರಿಗಳು ಎಂದು ನಿಂದಿಸುವವರು ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದನ್ನು ಮರೆಯಬಾರದು. ಶಾಸಕರು ರಾಜೀನಾಮೆ ನೀಡಿರುವುದನ್ನು ರಾಜಕೀಯ ವ್ಯಭಿಚಾರ ಎಂದು ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಆರೋಪಿಸುತ್ತಿದ್ದಾರೆ. ರಾಜೀನಾಮೆ ಕೊಟ್ಟು ಜನರ ಬಳಿಗೆ ಹೋಗುವುದು ರಾಜಮಾರ್ಗವಲ್ಲವೆ. ಆಡಳಿತದಲ್ಲಿರುವ ಪಕ್ಷದ ಶಾಸಕರು ರಾಜೀನಾಮೆ ನೀಡಲು ಕಾರಣ ಏನು ಎಂಬುದನ್ನು ತಣ್ತೀಭ್ರಷ್ಟ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಅರ್ಥೈಸಿಕೊಳ್ಳಬೇಕು ಎಂದಿದ್ದರು.

Find out more: