ಲಕ್ನೋ: ಪ್ರತಿಯೊಬ್ಬ ಆಟಗಾರನು ಏಕಾಂಗಿಯಾಗಿ ತಂಡವನ್ನೇ ಗೆಲ್ಲಿಸಬಲ್ಲ ಕೆರಿಬಿಯನ್ ವೆಸ್ಟ್ ಇಂಡೀಸ್ ಇದೀಗ ಅಫ್ಘಾನಿಸ್ಥಾನ ವಿರುದ್ಧ ದಿಗ್ವಿಜಯ ಸಾಧಿಸಿದೆ. ಅಫ್ಘಾನಿಸ್ಥಾನ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದ ವೆಸ್ಟ್‌ ಇಂಡೀಸ್‌ ಸರಣಿಯ ಏಕೈಕ ಟೆಸ್ಟ್‌ ಪಂದ್ಯವನ್ನು ಮೂರೇ ದಿನಗಳಲ್ಲಿ ತನ್ನದಾಗಿಸಿಕೊಂಡಿದೆ.
 
ಪಂದ್ಯದಲ್ಲಿ 90 ರನ್ನುಗಳ ಹಿನ್ನಡೆಗೆ ಸಿಲುಕಿದ ಅಫ್ಘಾನಿಸ್ಥಾನ ದ್ವಿತೀಯ ಸರದಿಯನ್ನು 120ಕ್ಕೆ ಮುಗಿಸಿತು. 31 ರನ್‌ ಗುರಿ ಪಡೆದ ವಿಂಡೀಸ್‌, ಒಂದಕ್ಕೆ 33 ರನ್‌ ಮಾಡಿ ವಿಜಯೋತ್ಸವ ಆಚರಿಸಿತು. ಚೇಸಿಂಗ್‌ ವೇಳೆ ಕ್ರೆಗ್‌ ಬ್ರಾತ್‌ವೇಟ್‌ (8) ವಿಕೆಟ್‌ ಉರುಳಿದರೆ, ಜಾನ್‌ ಕ್ಯಾಂಬೆಲ್‌ (19) ಮತ್ತು ಶೈ ಹೋಪ್‌ (6) ಅಜೇಯರಾಗಿ ಉಳಿದರು.
 
ಪಂದ್ಯದಲ್ಲಿ ಒಟ್ಟಾರೆ 10 ವಿಕೆಟ್‌ ಉರುಳಿಸಿ ಜೀವ ನಶ್ರೇಷ್ಠ ಬೌಲಿಂಗ್‌ ಪ್ರದರ್ಶನವಿತ್ತ ವಿಂಡೀಸಿನ ದೈತ್ಯ ಸ್ಪಿನ್ನರ್‌ ರಖೀಮ್‌ ಕಾರ್ನ್ವಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಿತ್ತ ಕಾರ್ನ್ವಾಲ್‌, ದ್ವಿತೀಯ ಇನ್ನಿಂಗ್ಸ್‌ನಲ್ಲಿ 46ಕ್ಕೆ 3 ವಿಕೆಟ್‌ ಕೆಡವಿದರು. ಜಾಸನ್‌ ಹೋಲ್ಡರ್‌, ರೋಸ್ಟನ್‌ ಚೇಸ್‌ ಕೂಡ 3 ವಿಕೆಟ್‌ ಕಿತ್ತು ಮಿಂಚಿದರು. ಪಂದ್ಯ ಗೆಲ್ಲಲು ಬೌಲರ್ ಗಳ ಪಾತ್ರ ಅತೀ ಮುಖ್ಯವಾಗಿದೆ ಎನ್ನಲಾಗುತ್ತಿದೆ. 
 
ಮುಂಬರುವ ಭಾರತದ ಎದುರಿನ ಸರಣಿಯ ಹಿನ್ನೆಲೆಯಲ್ಲಿ ಈ ಗೆಲುವು ನಮಗೆ ಅಗತ್ಯವಾಗಿತ್ತು ಎಂಬುದಾಗಿ ವೆಸ್ಟ್‌ ಇಂಡೀಸ್‌ ನಾಯಕ ಜಾಸನ್‌ ಹೋಲ್ಡರ್‌ ಹೇಳಿದ್ದಾರೆ. ಇನ್ನೊಂದೆಡೆ ಸೋಲಿಗೆ ಪ್ರತಿಕ್ರಿಯಿಸಿದ ಅಫ್ಘಾನ್‌ ನಾಯಕ ರಶೀದ್‌ ಖಾನ್‌, ನಾವು ಬ್ಯಾಟಿಂಗ್‌ ವಿಭಾಗದಲ್ಲಿ ಭಾರೀ ಸುಧಾರಣೆ ಕಾಣಬೇಕಾಗಿದೆ ಎಂದರು. ಮುಂದೆ ಭಾರತ ಪ್ರವಾಸ ಪ್ರಾರಂಭಿಸಲಿರುವ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾ ವಿರುದ್ಧ ಗೆಲ್ಲಲು ಮಾಸ್ಟರ್ ಪ್ಲಾನೊಂದು ತಯಾರಿಸಿಕೊಂಡಿದೆ ಎಂದು ತಿಳಿದುಬಂದಿದೆ.  ಆದರೆ ಐಸಿಸಿ ಯಲ್ಲಿ ನಂಬರ್ ಒನ್ ಆಗಿರುವ ಟೀಂ ಇಂಡಿಯಾವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಸಹ ಅವರಿಗೆ ತಿಳಿದಿದೆ. ಭಾರತದ ವಿರುದ್ಧ 3ಟೀ-ಟ್ವಂಟಿ, 3 ಒಂಡೇ ಪಂದ್ಯಗಳನ್ನಾಡಲಿದೆ. 
 
ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿ ಸ್ಥಾನ-187 ಮತ್ತು 120. ವೆಸ್ಟ್‌ ಇಂಡೀಸ್‌-277 ಮತ್ತು ಒಂದು ವಿಕೆಟಿಗೆ 33. ಪಂದ್ಯಶ್ರೇಷ್ಠ: ರಖೀಮ್‌ ಕಾರ್ನ್ವಾಲ್‌

Find out more: